ADVERTISEMENT

ಕುಣಿಗಲ್ | ಹುಲಿಯೂರುದುರ್ಗ ಪೊಲೀಸರಿಗಿಲ್ಲ ವಸತಿ ಗೃಹ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 7:22 IST
Last Updated 20 ಜುಲೈ 2025, 7:22 IST
ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಪೊಲೀಸ್ ವಸತಿ ಗೃಹಗಳಿದ್ದ ಜಾಗ
ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಪೊಲೀಸ್ ವಸತಿ ಗೃಹಗಳಿದ್ದ ಜಾಗ   

ಕುಣಿಗಲ್: ತಾಲ್ಲೂಕಿನ ಕುಣಿಗಲ್ ಮತ್ತು ಅಮೃತೂರು ಪೊಲೀಸರಿಗೆ ಠಾಣೆ ಪಕ್ಕದಲ್ಲೇ ವಸತಿ ಗೃಹಗಳಿದ್ದು, ಹುಲಿಯೂರುದುರ್ಗ ಪೊಲೀಸ್ ಸಿಬ್ಬಂದಿಗೆ ಮಾತ್ರ ವಸತಿಗೃಹಗಳ ಭಾಗ್ಯವಿಲ್ಲದಂತಾಗಿದೆ.

ಒಂದು ಕಾಲದಲ್ಲಿ ತಾಲ್ಲೂಕು ಕೇಂದ್ರ ಮತ್ತು ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನವಾಗಿದ್ದ ಹುಲಿಯೂರುದುರ್ಗ ಈಗ ಹೋಬಳಿ ಕೇಂದ್ರವಾಗಿದೆ. ಸ್ವಾತಂತ್ರ ಪೂರ್ವದಲ್ಲಿ (1940) ಹುಲಿಯೂರುದುರ್ಗ ಪೊಲೀಸ್ ಠಾಣೆ ಪ್ರಾರಂಭವಾಗಿದ್ದು, ಅಂದಿನಿಂದಲೂ ಕಾರ್ಯನಿರ್ವಹಿಸಿದ್ದ ಪಿಎಸ್‌ಐಗಳ ಪಟ್ಟಿ ಠಾಣೆಯ ಸೇವಾ ಫಲಕದಲ್ಲಿ ಇಂದಿಗೂ ಇದೆ.

ಠಾಣೆ ಪ್ರಾರಂಭವಾದ ನಂತರದ ದಿನಗಳಲ್ಲಿ ಠಾಣೆಯ ಪಕ್ಕದಲ್ಲಿ ಎಂಟು ಹೆಂಚಿನ ವಸತಿ ಗೃಹಗಳಿದ್ದು, ಕ್ರಮೇಣ ಶಿಥಿಲಗೊಂಡಿವೆ. ವಾಸಕ್ಕೆ ಯೋಗ್ಯವಿಲ್ಲದ ಕಾರಣ 2020ರಲ್ಲಿ ತೆರವು ಮಾಡಲಾಗಿದ್ದು, ಇದವರೆಗೂ ನೂತನ ವಸತಿ ಗೃಹಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.

ADVERTISEMENT

ಠಾಣೆಯಲ್ಲಿ ಇಬ್ಬರೂ ಪಿಎಸ್‌ಐ, ನಾಲ್ಕು ಎಎಸ್ಐ, 12 ಹೆಡ್ ಕಾನ್‌ಸ್ಟೆಬಲ್‌, 22 ಪೊಲೀಸ್ ಸಿಬ್ಬಂದಿ ಇದ್ದಾರೆ. ಕೆಲವರು ಮಾತ್ರ ಹುಲಿಯೂರುದುರ್ಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಉಳಿದವರು ಕುಣಿಗಲ್ ಮತ್ತು ತುಮಕೂರಿನಿಂದ ಬಂದು ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು ಎಂಬ ನಿಯಮವಿದ್ದರೂ, ಮೂಲಸೌಕರ್ಯ, ಅಗತ್ಯ ವಸತಿ ಗೃಹಗಳ ವ್ಯವಸ್ಥೆಯಾಗದ ಕಾರಣ ಪರ ಊರುಗಳಿಂದ ಬಂದು ಕಾರ್ಯನಿರ್ವಹಿಸಬೇಕಾದ ಅನಿವಾರ್ಯ ಸಿಬ್ಬಂದಿಗಳಿದ್ದರು.

ಹುಲಿಯೂರುದುರ್ಗ ಪ್ರಗತಿ ಹೊಂದುತ್ತಿರುವ ಹೋಬಳಿ ಕೇಂದ್ರವಾಗಿದ್ದು, ತುಮಕೂರು, ಮದ್ದೂರು, ಮಾಗಡಿ, ನಾಗಮಂಗಲ ತಾಲ್ಲೂಕಿನ ಸಂಪರ್ಕ ಕೇಂದ್ರವಾಗಿದೆ. ರಾಜ್ಯ ಹೆದ್ದಾರಿ 33 ಮತ್ತು 85 ಹಾದು ಹೋಗುತ್ತಿದ್ದು, ಹೋಬಳಿ ಕೇಂದ್ರಕ್ಕೆ ಅಗತ್ಯ ಪೊಲೀಸ್ ಸಿಬ್ಬಂದಿಗೆ ವಸತಿ ಗೃಹದ ಸೌಲಭ್ಯ ಕಲ್ಪಿಸಲು ಲೇಖಕರ ಬಳಗದ ಅಧ್ಯಕ್ಷ ಲಕ್ಷ್ಮಿ ನಾರಾಯಣ್ ಮನವಿ ಮಾಡಿದ್ದಾರೆ.

ಹುಲಿಯೂರುದುರ್ಗ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕಾಗಿ ಪಂಚಾಯಿತಿ ಕಟ್ಟೆಯ ಒಂದೂವರೆ ಎಕರೆ ಜಾಗ ಪಂಚಾಯಿತಿಯಿಂದ ನೀಡಲಾಗಿದೆ. ಆಸ್ತಿ ದಾಖಲೆಗಳು ಪೊಲೀಸ್ ಇಲಾಖೆ ಹೆಸರಿನಲ್ಲಿದ್ದರೂ, ಜಾಗ ಕಲ್ಲುಬಂಡೆಗಳಿಂದ ಕೂಡಿರುವುದರಿಂದ ವಸತಿಗೃಹ ನಿರ್ಮಾಣಕ್ಕೆ ಯೋಗ್ಯವಾಗಿಲ್ಲ ಎಂದು ತಿಳಿಸಿದ ಮೇಲೆ ಶೃಂಗಾರ ಸಾಗರದ ಬಳಿ ಸರ್ಕಾರಿ ಜಮೀನಿನಲ್ಲಿ ವಸತಿಗೃಹಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಸತಿ ಗೃಹ ನಿರ್ಮಾಣಕ್ಕೆ ಪೊಲೀಸ್ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ನಟರಾಜು ತಿಳಿಸಿದ್ದಾರೆ.

ಪಂಚಾಯಿತಿ ಕಟ್ಟೆ ಮತ್ತು ಶೃಂಗಾರ ಸಾಗರದ ಬಳಿ ಜಾಗ ಗುರುತಿಸಿ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲಾಖೆ ನಿರ್ಧಾರ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕಿದೆ.
ಮಾದ್ಯನಾಯಕ್, ಸಿಪಿಐ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.