ADVERTISEMENT

ಪ್ರಾಂತ ರೈತ ಸಂಘದ ಜಿಲ್ಲಾ ಸಮ್ಮೇಳನ: ರೈತ, ಕೂಲಿಕಾರ ಪರ ನೀತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:35 IST
Last Updated 24 ಫೆಬ್ರುವರಿ 2026, 6:35 IST
ತುಮಕೂರಿನಲ್ಲಿ ಸೋಮವಾರ ನಡೆದ ಪ್ರಾಂತ ರೈತ ಸಂಘದ ಜಿಲ್ಲಾ ಸಮ್ಮೇಳನದಲ್ಲಿ ಮುಖಂಡರಾದ ಟಿ.ಯಶವಂತ, ಸೈಯದ್ ಮುಜೀಬ್, ಆರ್.ಎಸ್.ಚನ್ನಬಸವಣ್ಣ, ಬಿ.ಉಮೇಶ್, ದೂಡ್ಡನಂಜಯ್ಯ, ರಾಜಮ್ಮ, ಎನ್.ಕೆ.ಸುಬ್ರಹ್ಮಣ್ಯ ಭಾಗವಹಿಸಿದ್ದರು
ತುಮಕೂರಿನಲ್ಲಿ ಸೋಮವಾರ ನಡೆದ ಪ್ರಾಂತ ರೈತ ಸಂಘದ ಜಿಲ್ಲಾ ಸಮ್ಮೇಳನದಲ್ಲಿ ಮುಖಂಡರಾದ ಟಿ.ಯಶವಂತ, ಸೈಯದ್ ಮುಜೀಬ್, ಆರ್.ಎಸ್.ಚನ್ನಬಸವಣ್ಣ, ಬಿ.ಉಮೇಶ್, ದೂಡ್ಡನಂಜಯ್ಯ, ರಾಜಮ್ಮ, ಎನ್.ಕೆ.ಸುಬ್ರಹ್ಮಣ್ಯ ಭಾಗವಹಿಸಿದ್ದರು   

ತುಮಕೂರು: ಸಣ್ಣ, ಅತಿಸಣ್ಣ ರೈತರು, ಕೃಷಿ ಕೂಲಿಕಾರರ ಪರವಾಗಿ ನೀತಿ ರೂಪಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಸೋಮವಾರ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮ್ಮೇಳನದಲ್ಲಿ ಆಗ್ರಹಿಸಲಾಯಿತು.

ಸಮ್ಮೇಳನಕ್ಕೆ ಚಾಲನೆ ನೀಡಿದ ಪ್ರಮುಖರಾದ ಸಿ.ಯತಿರಾಜು, ‘ದೇಶದಲ್ಲಿ ಶೇ 80ರಷ್ಟು ಸಣ್ಣ, ಅತಿ ಸಣ್ಣ ವರ್ಗಕ್ಕೆ ಸೇರಿದ ರೈತರಿದ್ದಾರೆ. ಬಂಡವಾಳ ಆಧಾರಿತ ಕೈಗಾರಿಕಾ ಕೃಷಿ ನೀತಿಗಳನ್ನು ಹೇರಿಕೆ ಮಾಡುವುದು ರೈತರ ಆರ್ಥಿಕ ಸ್ವಾವಲಂಬನೆ ಹಾಳು ಮಾಡಿದಂತೆ. ಮಾರುಕಟ್ಟೆ ಆಧಾರಿತ ಬೆಲೆ ವ್ಯವಸ್ಥೆಯಲ್ಲಿ ಸಣ್ಣ ರೈತರಿಗೆ ಸ್ಪರ್ಧಿಸುವ ಸಾಮರ್ಥ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಎಂ.ಎಸ್.ಸ್ವಾಮಿನಾಥನ್ ವರದಿಯಲ್ಲಿ ಕೃಷಿ ವೆಚ್ಚದ ಮೇಲೆ ಕನಿಷ್ಠ ಶೇ 50ರಷ್ಟು ಲಾಭ ಸೇರಿಸಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸುವಂತೆ ಶಿಫಾರಸು ಮಾಡಲಾಗಿತ್ತು. ಆದರೆ ಇದು ಜಾರಿಯಾಗಿಲ್ಲ. ಜಾಗತಿಕ ಮಾರುಕಟ್ಟೆ ಆಧಾರಿತ ಉತ್ಪಾದನೆ, ಮುಕ್ತ ವ್ಯಾಪಾರ ಒಪ್ಪಂದಗಳ ಪರಿಣಾಮವಾಗಿ ರೈತರು ಭಾರಿ ಸಬ್ಸಿಡಿ ಪಡೆಯುವ ಬಹುರಾಷ್ಟ್ರೀಯ ಕಂಪನಿಗಳ ಜತೆ ಸ್ಪರ್ಧಿಸುವುದು ಕಷ್ಟಕರವಾಗಿದೆ. ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದಗಳಿಂದ ಸಂಕಷ್ಟ ಎದುರಿಸಬೇಕಾಗಿದೆ ಎಂದರು.

ADVERTISEMENT

ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ‘ಬದುಕು ಕಟ್ಟಿಕೊಳ್ಳಲು ಸರ್ಕಾರ ಭೂಮಿ ನೀಡುತ್ತಿಲ್ಲ. ದೊಡ್ಡ ಉದ್ಯಮಿಗಳಿಗೆ ಧಾರಾಳವಾಗಿ ಹಂಚಿಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 50 ಸಾವಿರ ಎಕರೆ ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಭೂ ಸ್ವಾಧೀನ ಮಾಡಲಾಗಿದೆ. ಚೆನ್ನೈ– ಬೆಂಗಳೂರು ಕೈಗಾರಿಕಾ ಕಾರಿಡಾರ್‌ಗೆ 8 ಸಾವಿರ ಎಕರೆ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ’ ಎಂದು ತಿಳಿಸಿದರು.

ಉದ್ಯಮಿಗಳು ಪಡೆದ ಭೂಮಿಯನ್ನು ಮಾರಾಟ ಮಾಡಿ ರಿಯಲ್ ಎಸ್ಟೇಟ್ ದಂಧೆ ನಡೆಸಿದ್ದಾರೆ. ಕೆಐಎಡಿಬಿಯಿಂದ ಪಡೆದುಕೊಂಡ ಭೂಮಿಯನ್ನು ಇನ್ಫೋಸಿಸ್ ನಾರಾಯಣಮೂರ್ತಿ, ಬಿಪಿಎಲ್‌ನ ರಾಜೀವ್ ಚಂದ್ರಶೇಖರ್ ಇತರರು ಮಾರಾಟ ಮಾಡಿದ್ದಾರೆ ಎಂದು ಹೇಳಿದರು.

ಸಿಐಟಿಯು ಮುಖಂಡ ಸೈಯದ್ ಮುಜೀಬ್, ‘ಜಿಲ್ಲಾ ಆಡಳಿತ ವಿವಿಧ ಯೋಜನೆಗಳಿಗೆ ಭೂ ಸ್ವಾಧಿನ ಸಮಸ್ಯೆ ಬಗೆಹರಿಸುವ ಮೂಲಕ ಸಾಧನೆ ಮಾಡಿದೆ. ಆದರೆ ರೈತರ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ’ ಎಂದು ದೂರಿದರು.

ಮುಖಂಡ ಆರ್.ಎಸ್.ಚನ್ನಬಸವಣ್ಣ, ‘ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕು ಪತ್ರ, ದುರಸ್ತು, ಪೋಡಿ ಮಾಡಿಕೊಡಲು ಜಿಲ್ಲಾ ಆಡಳಿತ ಮುಂದಾಗಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಬಿ.ಉಮೇಶ್, ಎನ್.ಕೆ.ಸುಬ್ರಹ್ಮಣ್ಯ, ದೂಡ್ಡನಂಜಯ್ಯ, ರಾಜಮ್ಮ ಇತರರು ಉಪಸ್ಥಿತರಿದ್ದರು. ಬೋಜರಾಜು ಸ್ವಾಗತಿಸಿ, ಕರಿಯಣ್ಣ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.