ADVERTISEMENT

ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 3:05 IST
Last Updated 26 ಜನವರಿ 2021, 3:05 IST
ತುಮಕೂರಿನಲ್ಲಿ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
ತುಮಕೂರಿನಲ್ಲಿ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು   

ತುಮಕೂರು: ಪ್ರೀತಿ, ಶಾಂತಿ, ಸಹಬಾಳ್ವೆ ಮೂಲಕವೇ ಬದುಕು ಕಟ್ಟಿಕೊಳ್ಳಬೇಕು. ಆ ಮೂಲಕ ಸಹೋದರತೆಯನ್ನು ಪ್ರತಿಪಾದಿಸಬೇಕು ಎಂದು ಸಾಹಿತಿ ಸಿದ್ದಗಿರಿ ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಸೀರತ್ ಅಭಿಯಾನದ ಅಂಗವಾಗಿ ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ಏರ್ಪಡಿಸಿದ್ದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಭೀಮಸಂದ್ರದ ಗ್ಲೋಬಲ್ ಶಾಯಿನ್ ಬಾಲಕಿಯರ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

‘ಯಾವ ಧರ್ಮವೂ ಹಿಂಸೆ ಪ್ರತಿಪಾದಿಸಿಲ್ಲ. ನೀನು ಒಳ್ಳೆಯವನಾಗು, ಇತರರನ್ನು ಒಳ್ಳೆಯವರನ್ನಾಗಿ ಮಾಡು ಎಂದು ಪೈಗಂಬರ್ ಹೇಳಿದ್ದಾರೆ. ಅದನ್ನೇ ಇತರೆ ಧರ್ಮಗಳು ಹೇಳಿವೆ’ ಎಂದರು.

ADVERTISEMENT

ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಟಿ. ಮುರಳಿಕೃಷ್ಣಪ್ಪ, ‘ಕುಟುಂಬ, ಶಿಕ್ಷಣ, ಸಮಾಜ ಒಂದಕ್ಕೊಂದು ಪೂರಕವಾಗಿವೆ. ಈ ವ್ಯವಸ್ಥೆಯಲ್ಲಿ ಏನು ಕಲಿಯುತ್ತೇವೆ ಎಂಬುದು ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಅಧ್ಯಯನ ನಡೆಸಿ, ಪ್ರಾಮಾಣಿಕತೆ, ಆತ್ಮವಿಶ್ವಾಸ ಮೂಡಿಸಿಕೊಂಡರೆ ಗುರಿ ಮುಟ್ಟಲು ಸಾಧ್ಯವಿದೆ’ ಎಂದು ಸಲಹೆ ಮಾಡಿದರು.

ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಹಮದ್ ಕುಂಇ, ‘ಆರೋಗ್ಯಪೂರ್ಣ ಸಮಾಜ ಕಾಣಬೇಕಾದರೆ ಆರೋಗ್ಯಪೂರ್ಣ ಮನಸ್ಸುಗಳು ಇರಬೇಕು. ಹಗೆತನ, ದ್ವೇಷ, ಅಸೂಯೆಗಳು ಎಂದಿಗೂ ಯಾರಿಗೂ ಒಳ್ಳೆಯದಲ್ಲ. ದುರಾದೃಷ್ಟವಶಾತ್ ಇಂತಹ ವಿಕೃತಿಗಳೇ ಸಮಾಜದಲ್ಲಿ ಹೆಚ್ಚು ಕಂಡುಬರುತ್ತವೆ’ ಎಂದು ವಿಷಾದಿಸಿದರು.

ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ. ರಾಜಕುಮಾರ, ‘ಯಾವ ಧರ್ಮ, ದೇವರು, ಮಹನೀಯರು ದ್ವೇಷ, ಅಸೂಯೆಗಳ ಬಗ್ಗೆ ಹೇಳಿಲ್ಲ. ಎಲ್ಲ ಕಡೆಯೂ ಪ್ರೀತಿ, ವಾತ್ಸಲ್ಯವನ್ನೇ ತೋರಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.

ಶಾಹೀನ್ ಪಿಯು ಕಾಲೇಜು ಮುಖ್ಯಸ್ಥ ಅಪ್ಜಲ್ ಷರೀಫ್,ರಿಯಾಜ್ ರೌನ್, ಹನೀಫ್‍ ಉಲ್ಲಾ, ಶೇಖ್ ಜೈ ಉಲ್ಲಾ
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.