ADVERTISEMENT

ತುಮಕೂರು | ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಮೆರವಣಿಗೆ: ರಾರಾಜಿಸಿದ ನೀಲಿ ಬಾವುಟ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 4:38 IST
Last Updated 15 ಏಪ್ರಿಲ್ 2025, 4:38 IST
ತುಮಕೂರಿನಲ್ಲಿ ಸೋಮವಾರ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಮೆರವಣಿಗೆ ನಡೆಯಿತು
ತುಮಕೂರಿನಲ್ಲಿ ಸೋಮವಾರ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಮೆರವಣಿಗೆ ನಡೆಯಿತು   

ತುಮಕೂರು: ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಜಿಲ್ಲಾ ಆಡಳಿತ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ನೀಲಿ ಬಾವುಟಗಳು ರಾರಾಜಿಸಿದವು. ನೂರಾರು ಜನ ಕೈಯಲ್ಲಿ ಬಾವುಟ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

‘ಜೈಭೀಮ್‌’ ಘೋಷಣೆ ಕೂಗಿ ಸಂಭ್ರಮಿಸಿದರು. ವಿವಿಧ ಕಲಾ ತಂಡಗಳ ಜತೆಗೆ ಕಾಲ್ನಡಿಗೆಯಲ್ಲಿ ಸಾಗಿದರು. ಕೀಲು ಕುದುರೆ, ಡೋಲು, ಸೋಮನ ಕುಣಿತ, ಗೊರವರ ಕುಣಿತ, ಕಂಸಾಳೆ, ಕೋಲಾಟ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಅಂಬೇಡ್ಕರ್‌ ಜೀವನ, ಸಾಧನೆ ಪರಿಚಯಿಸುವ ವಿವಿಧ ರೀತಿಯ ಸ್ತಬ್ಧಚಿತ್ರಗಳು ಭಾಗವಹಿಸಿದ್ದವು.

ಬಿಜಿಎಸ್‌ ವೃತ್ತದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ನೀಲಿ ಬಾವುಟ ಹಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಅವರು ಸಹ ಜನರ ಜತೆಗೆ ಹೆಜ್ಜೆ ಹಾಕಿದರು. ಬಿ.ಎಚ್‌.ರಸ್ತೆ, ಎಂ.ಜಿ.ರಸ್ತೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿ ತಲುಪಿ, ಅಲ್ಲಿಂದ ಸ್ವಾತಂತ್ರ್ಯ ಚೌಕ, ಅಶೋಕ ರಸ್ತೆ ಮೂಲಕ ಬಿಜಿಎಸ್‌ ವೃತ್ತದಲ್ಲಿ ಕೊನೆಗೊಂಡಿತು.

ADVERTISEMENT
ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಅಂಬೇಡ್ಕರ್‌ ಅವರ ಅಪರೂಪದ ಚಿತ್ರಗಳನ್ನು ವೀಕ್ಷಿಸಿದ ಸಾರ್ವಜನಿಕರು

ಗಮನ ಸೆಳೆದ ಚಿತ್ರ ಪ್ರದರ್ಶನ

ಮಹಾನಗರ ಪಾಲಿಕೆ ಆವರಣದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಡಾ.ಬಾಬು ಜಗಜೀವನರಾಮ್‌ ಅವರ ಅಪರೂಪದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಹಲವು ವಿಶೇಷ ಸಂದರ್ಭಗಳಲ್ಲಿ ಸೆರೆ ಹಿಡಿದ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇಬ್ಬರ ಬದುಕು ಸಾಧನೆ ಕುರಿತು ಚಿತ್ರಗಳ ಮೂಲಕ ಕಟ್ಟಿ ಕೊಡಲಾಯಿತು. ಪ್ರದರ್ಶನ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಜನರು ಸಾಲುಗಟ್ಟಿ ನಿಂತು ಇಬ್ಬರು ನಾಯಕರ ಜೀವನದ ಹಲವು ಮಜಲುಗಳ ಬಗ್ಗೆ ತಿಳಿದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.