ADVERTISEMENT

ಎಕ್ಸ್‌ ಪ್ರೆಸ್ ಲಿಂಕ್ ಕೆನಾಲ್ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಮೇ 2024, 7:06 IST
Last Updated 30 ಮೇ 2024, 7:06 IST
ತುಮಕೂರು ಹೇಮಾವತಿ ನಾಲಾ ವಲಯ ಕಚೇರಿ ಎದುರು ಬುಧವಾರ ಸಂಯುಕ್ತ ಹೋರಾಟ– ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಧರಣಿ ನಡೆಸಲಾಯಿತು
ತುಮಕೂರು ಹೇಮಾವತಿ ನಾಲಾ ವಲಯ ಕಚೇರಿ ಎದುರು ಬುಧವಾರ ಸಂಯುಕ್ತ ಹೋರಾಟ– ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಧರಣಿ ನಡೆಸಲಾಯಿತು   

ತುಮಕೂರು: ಹೇಮಾವತಿ ಮೂಲ ನಾಲೆಗೆ ಧಕ್ಕೆ ತರುವ ಮಾಗಡಿ ಎಕ್ಸ್‌ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿ ‘ಸಂಯುಕ್ತ ಹೋರಾಟ– ಕರ್ನಾಟಕ’ ಸಂಘಟನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಹೇಮಾವತಿ ನಾಲಾ ವಲಯದ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಯಿತು.

ನಗರದ ಬಿಜಿಎಸ್ ವೃತ್ತದಿಂದ ಹೇಮಾವತಿ ವಲಯ ಕಚೇರಿ ವರೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸಲಾಯಿತು. ರಾಜ್ಯ ರೈತ ಸಂಘ, ಸಿಪಿಐಎಂ, ಕರ್ನಾಟಕ ಪ್ರಾಂತ ರೈತ ಸಂಘ, ಎಐಕೆಕೆಎಂಎಸ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ರೈತರು ಭಾಗವಹಿಸಿದ್ದರು.

ತುಮಕೂರು ನಾಲಾ ವಲಯಕ್ಕೆ ನಿಗದಿಯಾಗಿರುವ 24.50 ಟಿಎಂಸಿ ಅಡಿಗಳ ನೀರಿನ ಹಂಚಿಕೆಯಲ್ಲಿ ಯಾವುದೇ ವ್ಯತ್ಯಾಸವಾಗಬಾರದು. ಮಾಗಡಿಗೆ ನೀರು ಹಂಚಿಕೆಯನ್ನು ಮಾಡಿ ಮೂಲ ನಾಲೆಯಿಂದ ತೆಗೆದುಕೊಂಡು ಹೋಗಬೇಕು. ಹೊಸದಾಗಿ ಲಿಂಕ್ ಕೆನಾಲ್ ಮಾಡದೆ ಕುಣಿಗಲ್ ಮೂಲಕ ನೀರು ಹರಿಸಬೇಕು. ತಕ್ಷಣವೇ ಎಲ್ಲಾ ಸಂಘಟನೆಗಳೊಂದಿಗೆ ಸಮಾಲೋಚನಾ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಗುಬ್ಬಿ ತಾಲ್ಲೂಕಿನ ಬಿಕ್ಕೆಗುಡ್ಡ, ಹಾಗಲವಾಡಿ ಕುಡಿಯುವ ನೀರಿನ ಯೋಜನೆಯ ಕಾಲಾವಧಿ ಮುಗಿದು 2 ವರ್ಷ ಕಳೆದಿದ್ದರೂ ಕಾಮಗಾರಿ ಪೂರ್ಣಗೊಳಿಸಿ ನೀರು ಒದಗಿಸಿಲ್ಲ. ಕೂಡಲೇ ಭೂಸ್ವಾಧೀನಕ್ಕೊಳಪಟ್ಟ ರೈತರಿಗೆ ಪರಿಹಾರ ವಿತರಿಸಿ ಬಾಕಿ ಉಳಿದಿರುವ ಕೆಲಸ ಪೂರ್ಣಗೊಳಿಸಿ, ಈ ಬಾರಿಯ ಮಳೆಗಾಲದಲ್ಲೇ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆ ಬರಗಾಲಕ್ಕೆ ತುತ್ತಾಗಿದ್ದು, ರೈತರ ಬೆಳೆಗಳು ಒಣಗುತ್ತಿವೆ. ಇಂತಹ ಸಮಯದಲ್ಲಿ ಹೇಮಾವತಿ ಶಾಖಾ ನಾಲೆಯಿಂದ ನೇರವಾಗಿ ಮಾಗಡಿಗೆ ಲಿಂಕ್ ಕೆನಾಲ್ ನಿರ್ಮಿಸುವ ಕಾಮಗಾರಿಯನ್ನು ಏಕಾಏಕಿ ಆರಂಭಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯ ಜನರು ಕುಡಿಯುವ ನೀರಿಗೆ ಹೇಮಾವತಿ ನೀರನ್ನೇ ಅವಲಂಬಿಸಿದ್ದಾರೆ. ರೈತರು ಕೃಷಿಗೂ ಇದೇ ನೀರನ್ನು ಆಶ್ರಯಿಸಿದ್ದಾರೆ. ಮಾಗಡಿಗೆ ನೇರವಾಗಿ ನೀರು ಹರಿಸಿದರೆ ಜಿಲ್ಲೆಯಲ್ಲಿ ತೀವ್ರತರವಾದ ಕೃಷಿ ಬಿಕ್ಕಟ್ಟು ಎದುರಾಗಲಿದೆ. ಎಕ್ಸ್ ಪ್ರೆಸ್ ನಾಲೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಜಿಲ್ಲಾ ಆಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಇಂತಹ ನಡೆಯಿಂದ ತುಮಕೂರು ಹಾಗೂ ರಾಮನಗರ ಜಿಲ್ಲೆಯ ಜನರು ಪರಸ್ಪರ ವಿರೋಧಿಗಳಂತೆ ಚಿತ್ರಿಸುವ ಅಪಾಯವಿದೆ ಎಂಬ ಆತಂಕ ವ್ಯಕ್ತಪಡಿಸಿದರು.

ಸಂಯುಕ್ತ ಹೋರಾಟ– ಕರ್ನಾಟಕ ಸಂಘಟನೆ ಮುಖಂಡರಾದ ಎ.ಗೋವಿಂದರಾಜು, ಜಿ.ಸಿ.ಶಂಕರಪ್ಪ, ಆರ್.ಎಸ್.ಚನ್ನಬಸವಣ್ಣ, ಅಜ್ಜಪ್ಪ, ಎಸ್.ಎನ್.ಸ್ವಾಮಿ, ಕಂಬೇಗೌಡ, ಬಿ.ಉಮೇಶ್, ಸುಬ್ರಹ್ಮಣ್ಯ ಮೊದಲಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.