ADVERTISEMENT

ಕುಣಿಗಲ್: ಸ್ಟಡ್ ಫಾರ್ಮ್‌ಗೆ ರೇಸ್‌ಕೋರ್ಸ್‌ ಸ್ಥಳಾಂತರಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 7:22 IST
Last Updated 21 ಫೆಬ್ರುವರಿ 2026, 7:22 IST
   

ಕುಣಿಗಲ್: ಪಾರಂಪರಿಕ ತಾಣವಾದ ಕುಣಿಗಲ್ ಸ್ಟಡ್ ಫಾರ್ಮ್‌ಗೆ ರೇಸ್ ಕೋರ್ಸ್‌ ಸ್ಥಳಾಂತರ ವಿರೋಧಿಸಿ ತಾಲ್ಲೂಕು ಜೆಡಿಎಸ್, ರೈತ ಸಂಘ ಮತ್ತಿತ್ತರ ಸಂಘ ಸಂಸ್ಥೆಗಳು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದವು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್, ಜಗದೀಶ್ ಮಾತನಾಡಿ, ತಾಲ್ಲೂಕಿನ ವಿವಿಧ ಸಂಘಟನೆಗಳ ಹೋರಾಟದ ಫಲವಾಗಿ ಸ್ಟಡ್ ಫಾರ್ಮ್‌ ಜಾಗದಲ್ಲಿ ಇಂಟಿಗ್ರೇಟೆಡ್ ಸಿಟಿ ನಿರ್ಮಾಣ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ. ಆದರೂ ಶೈಕ್ಷಣಿಕ ಪ್ರಗತಿಗೆ ಕಾರಣವಾಗುವ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜು ಕನಕಪುರಕ್ಕೆ, ಜೂಜಾಟದ ರೇಸ್ ಕೋರ್ಸ್ ಅಡ್ಡೆಯನ್ನು ಕುಣಿಗಲ್‌ಗೆ ಇದು ಕುಣಿಗಲ್ ಶಾಸಕರ ಕಾರ್ಯವೈಖರಿ ಎಂದು ಲೇವಡಿ ಮಾಡಿದರು.

ಇತಿಹಾಸ ಪುಟದಲ್ಲಿ ಉಳಿದಿರುವ ಕುದುರೆ ಫಾರ್ಮ್‌ ಅನ್ನು ಖಾಸಗಿ ಕಂಪನಿಗೆ ಮಾರಾಟ ಮಾಡುವ ಉದ್ದೇಶದಿಂದ ಶಾಸಕ ರಂಗನಾಥ್‌ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್‌ ಸರ್ಕಾರದ ಮೇಲೆ ಒತ್ತಡ ತಂದು ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಹೆಸರಿಗಷ್ಟೇ ರೇಸ್ ಕೋರ್ಸ್ ಇಲ್ಲಿಗೆ ತರುತ್ತಿದ್ದು, ಅದರ ಹಿಂದೆ ರೆಸಾರ್ಟ್, ವಿಲ್ಲಾ, ಗಾಲ್ಫ್ ಕ್ಲಬ್ ಮಾಫಿಯಾ ನಡೆಯುತ್ತಿದೆ ಎಂದು ದೂರಿದರು. 

ADVERTISEMENT

ರಾಜ್ಯ ಸರ್ಕಾರ ಈ ಕೂಡಲೇ ಈ ಆದೇಶ ಹಿಂಪಡೆಯಬೇಕು ಒಂದು ವೇಳೆ ಹಠ ಹಿಡಿದು ಮಾಡಲು ಮುಂದಾದರೆ ಕಾನೂನು ಹೋರಾಟಕ್ಕೂ ಚಿಂತನೆ ನಡೆಸಲಾಗುತ್ತಿದೆ ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ತಾಲ್ಲೂಕಿನ ಯುವ ಜನತೆಗೆ ಉದ್ಯೋಗಾವಕಾಶ ಕಲ್ಪಿಸಬೇಕಾದ ಶಾಸಕರು ರೇಸ್ ಕೋರ್ಸ್ ಆರಂಭಿಸೊ ಮೂಲಕ ಯುವಜನರನ್ನು ಜೂಜುಕೋರರನ್ನಾಗಿ ಮಾಡಲು ಹೊರಟಿದ್ದಾರೆ. ರೇಸ್ ಕೋರ್ಸ್‌ನಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಕುದುರೆ ಫಾರ್ಮ್‌ ಪಶುಸಂಗೋಪನ ಇಲಾಖೆ ವಶದಲ್ಲಿದ್ದು, ಅದು ಸಹ ರೈತರ ಸ್ವತ್ತಾಗಿದೆ. ಕೃಷಿ ಚಟುವಟಿಕೆ ಬಿಟ್ಟು ಅನ್ಯ ಉದ್ದೇಶದ ಯಾವುದೇ ಚಟುವಟಿಕೆ ನಡೆಸಲು ತಾಲ್ಲೂಕಿನ ರೈತರು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ರೇಸ್ ಕೋರ್ಸ್ ಆರಂಭದ ವಿರುದ್ಧ ಆಂದೋಲನ ಆರಂಭಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಕಾಡುಗೊಲ್ಲ ಹೋರಾಟ ಅಸ್ಮಿತೆ ಸಮಿತಿಯ ಜಿ.ಕೆ. ನಾಗಣ್ಣ ಮಾತನಾಡಿ, ಟಿಪ್ಪು ಸುಲ್ತಾನ್ ಬಗ್ಗೆ ಗೌರವ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಟಿಪ್ಪು ಸುಲ್ತಾನ್ ಸ್ಥಾಪಿಸಿ ಅಭಿವೃದ್ಧಿಪಡಿಸಿದ್ದ ಕುದುರೆ ಫಾರ್ಮ್‌ ಅನ್ನು ಜೂಜುತಾಣ ಮಾಡಲು ಹೊರಟಿದ್ದಾರೆ. ಪಾರಂಪರಿಕ ತಾಣವಾದ ಕುದುರೆ ಫಾರ್ಮ್‌ ಉಳಿಸಬೇಕು. ಮುಖ್ಯಮಂತ್ರಿ  ಸಿದ್ದರಾಮಯ್ಯ ಕೇವಲ ಡಿ.ಕೆ. ಶಿವಕುಮಾರ್ ಕುಟುಂಬದ ಅನುಕೂಲಕ್ಕಾಗಿ ಸರ್ಕಾರಿ ಜಮೀನನ್ನು ಬಲಿಕೊಡುವುದು ಸರಿಯಲ್ಲ. ಅವರು ತಮ್ಮತನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬದ್ಧತೆ ಮೆರೆಯಬೇಕಿದೆ.

ಮುಖಂಡ ತರೀಕೆರೆ ಪ್ರಕಾಶ್, ಮಂಜುನಾಥ, ಕುದುರೆ ಫಾರಂ ನೌಕರ ಸಂಘದ ಶಂಕರ್, ಬಜರಂಗದಳದ ಗಿರೀಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.