
ತುಮಕೂರು: ‘ವಿಬಿ– ಜಿ ರಾಮ್ ಜಿ’ ಮಸೂದೆ ವಿರೋಧಿಸಿ ನಗರದ ಕೇಂದ್ರ ಸಚಿವ ವಿ.ಸೋಮಣ್ಣ ಕಚೇರಿ ಮುಂಭಾಗ ಸೋಮವಾರ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಮಸೂದೆ ಜಾರಿ ಮಾಡದಂತೆ ರಾಷ್ಟ್ರಪತಿಗೆ ಸಚಿವರು ಪತ್ರ ಬರೆಯಬೇಕು ಎಂದು ಒತ್ತಾಯಿಸಿದರು.
‘ನರೇಗಾ ಯೋಜನೆ ಗ್ರಾಮೀಣ ಭಾಗದ ಕೂಲಿ ಆಶ್ರಿತ ಕುಟುಂಬಗಳ ಜೀವನಾಡಿಯಾಗಿದೆ. ಸ್ವಾವಲಂಬಿ ಜೀವನಕ್ಕೆ ನೆರವಾಗಿದೆ. ರಾಷ್ಟ್ರದ ಕೋಟ್ಯಂತರ ಜನರು ಕೆಲಸ ಮಾಡುತ್ತಿದ್ದಾರೆ. ಇದು ಗ್ರಾಮೀಣ ಜನರ ವಲಸೆ ತಪ್ಪಿಸಿದೆ’ ಎಂದು ಸಂಘಟನೆ ಜಿಲ್ಲಾ ಸಂಚಾಲಕಿ ಕೆ.ಸೌಮ್ಯಾ ಹೇಳಿದರು.
ಈ ಹಿಂದೆ ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಅನುದಾನ ಕೊಡುತ್ತಿದ್ದರೆ, ಈಗ ಕೇಂದ್ರ ಶೇ 60ರಷ್ಟು, ರಾಜ್ಯ ಶೇ 40ರಷ್ಟು ಅನುದಾನ ನೀಡಬೇಕಿದೆ. ರಾಜ್ಯದ ಹೆಚ್ಚಿನ ತೆರಿಗೆ ಹಣ ಕೇಂದ್ರಕ್ಕೆ ಹೋಗುತ್ತದೆ. ಇಂತಹ ಸಮಯದಲ್ಲಿ ಇಷ್ಟು ಮೊತ್ತವನ್ನು ರಾಜ್ಯ ಸರ್ಕಾರ ನೀಡಲು ಸಾಧ್ಯವಿಲ್ಲ. ಇದರಿಂದ ದುಡಿಯುವ ಕೈಗಳಿಗೆ ಕೆಲಸ ಸಿಗದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ನರೇಗಾದಲ್ಲಿ ವರ್ಷ ಪೂರ್ತಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಹೊಸ ಮಸೂದೆಯಲ್ಲಿ ಬೇಡಿಕೆ ಆಧಾರಿತವಾಗಿ ಕೂಲಿ ನೀಡುವುದು ತಾರತಮ್ಯ ನೀತಿಯಾಗಿದೆ. ಉದ್ಯೋಗದ ಹಕ್ಕು ಕಸಿಯುತ್ತದೆ ಎಂದು ತಿಳಿಸಿದರು.
ವಿ.ಸೋಮಣ್ಣ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು. ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಮಮತಾ, ವಿ.ಅಶ್ವಿನಿ, ಕವಿತಾ, ಈರಮ್ಮ, ನರಸಪ್ಪ, ಕಲ್ಪನಾ, ಗೋಪಿ, ಚೈತ್ರಾ, ನಂದಿನಿ, ಮಾರಕ್ಕ, ಮೂರ್ತಿ, ಅಶೋಕ್, ಗಂಗಲಕ್ಷ್ಮಿ ಮೊದಲಾದವರು ಪಾಲ್ಗೊಂಡಿದ್ದರು.