ADVERTISEMENT

ತುಮಕೂರು: ಉಚಿತ ಲಸಿಕೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 4:51 IST
Last Updated 16 ಜೂನ್ 2021, 4:51 IST
ತುಮಕೂರಿನಲ್ಲಿ ಎಡ ಪಕ್ಷಗಳ ಮುಖಂಡರು ಪ್ರತಿಭಟಿಸಿದರು
ತುಮಕೂರಿನಲ್ಲಿ ಎಡ ಪಕ್ಷಗಳ ಮುಖಂಡರು ಪ್ರತಿಭಟಿಸಿದರು   

ತುಮಕೂರು: ಕೋವಿಡ್‌ಗೆ ಉಚಿತವಾಗಿ ಹಾಗೂ ಸಾರ್ವತ್ರಿಕ ಲಸಿಕೀಕರಣಕ್ಕೆ ಆಗ್ರಹಿಸಿ ಸಿಪಿಎಂ, ಸಿಪಿಐ, ಎಸ್‌ಯುಸಿಐ ಪಕ್ಷಗಳ ಮುಖಂಡರು ಜಂಟಿಯಾಗಿ ನಗರದ ಬಿಎಸ್‌ಎನ್‌ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಾಸಿಗೆ ಕೊರತೆಯಾಗಲು, ಲಸಿಕೆ, ಔಷಧಿ, ಆಮ್ಲಜನಕ ಹಗರಣ ಹಾಗೂ ಜಾತಿ, ರಾಜಕೀಯತಾರತಮ್ಯದಿಂದ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಸಿಗದ ಬಗ್ಗೆ ಸ್ವತಂತ್ರ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಆರೋಪಿ ಶಾಸಕರಿಂದ ರಾಜೀನಾಮೆ ಪಡೆಯಬೇಕು. ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟವರಿಗೆ, ಅನಾಥರಾದ ಮಕ್ಕಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲಾ ಕುಟುಂಬಗಳಿಗೆ ಮಾಸಿಕ ತಲಾ 10 ಕೆ.ಜಿ ಆಹಾರ ಧಾನ್ಯ ನೀಡಬೇಕು. ಆರೋಗ್ಯ ಸುರಕ್ಷತಾ ಸಾಮಗ್ರಿಗಳ ಪೊಟ್ಟಣ ನೀಡಬೇಕು. ಕೋವಿಡ್ ನಿಯಂತ್ರಣಕ್ಕೆ ಬರುವವರೆಗೂ ನೊಂದ ಪ್ರತಿ ಕುಟುಂಬಕ್ಕೆ ₹10 ಸಾವಿರ ನೆರವು ನೀಡಬೇಕು. ಪರಿಶಿಷ್ಟರು, ಬಡವರು ಇರುವ ಪ್ರದೇಶಗಳಿಗೆ ಇಂದಿರಾ ಕ್ಯಾಂಟೀನ್ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಬಡವರಿಗೆ ಕಡಿತ ಮಾಡಿರುವ ಪಡಿತರವನ್ನು ವಾಪಸ್ ನೀಡಬೇಕು. ಹೊಲದಲ್ಲೇ ಕೊಳೆತು ಹಾಳಾದ ಹೂ, ಹಣ್ಣು, ಆಲೂಗಡ್ಡೆ, ಈರುಳ್ಳಿ ಬೆಳೆಗೆ ಎಕರೆಗೆ ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕು. ರೈತರು, ಕೂಲಿಕಾರರು, ಕಾರ್ಮಿಕರು, ಕಸುಬುದಾರರು, ಪರಿಶಿಷ್ಟರು, ಆದಿವಾಸಿಗಳು, ಅಲ್ಪಸಂಖ್ಯಾತರು, ಮಹಿಳೆಯರು ಪಡೆದಿರುವ ಸಾಲ ಮನ್ನಾ ಮಾಡಬೇಕು. ಕೇರಳ ರಾಜ್ಯದ ಋಣ ಮುಕ್ತ ಕಾಯ್ದೆ ಮಾದರಿಯಲ್ಲಿ ಸಾಲ ಮನ್ನಾ ಮಾಡಬೇಕು. ಕಾರ್ಮಿಕರಿಗೆ
ಲಾಕ್‌ಡೌನ್ ಅವಧಿಯ ಪೂರ್ಣ ವೇತನ ಕೊಡಿಸಿ, ಉದ್ಯೋಗ ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು
ಎಂದರು.

ಉದ್ಯೋಗ ಖಾತ್ರಿಯನ್ನು ನಗರಗಳಿಗೆ ವಿಸ್ತರಿಸಿ, 200 ದಿನಗಳಿಗೆ ಹೆಚ್ಚಿಸಬೇಕು, ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ವಿಮೆ ಸೌಲಭ್ಯ ಕಲ್ಪಿಸಬೇಕು. ರೈತ, ಕಾರ್ಮಿಕ ವಿರೋಧಿ ಕಾಯ್ದೆ, ಜಾನುವಾರು ಪ್ರತಿಬಂಧಕ ಕಾಯ್ದೆಗಳನ್ನು ಹಿಂಪಡೆಯಬೇಕು, ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿದರು.

ಸಿಪಿಎಂ ರಾಜ್ಯ ಸಮಿತಿ ಸದಸ್ಯ ಸೈಯದ್ ಮುಜೀಬ್, ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಮುಖಂಡರಾದ ರಂಗಧಾಮಯ್ಯ, ಕಟ್ಟಡ ಕಾರ್ಮಿಕ ಸಂಘದ ಕಲೀಲ್, ಫುಟ್‌ಪಾತ್ ವ್ಯಾಪಾರಿಗಳ ಸಂಘದ ರಾಜಶೇಖರ್, ವಸಿಂ ಅಕ್ರಂ, ಜಗದೀಶ್, ಎಐಟಿಯುಸಿ ಶಾಂತರಾಜು, ನರಸಿಂಹಮೂರ್ತಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.