ADVERTISEMENT

ತುರುವೇಕೆರೆ ತಾಲ್ಲೂಕಿನಲ್ಲಿ ತೀವ್ರ ಬಿರುಗಾಳಿ ಮಳೆ:ನೆಲಕಚ್ಚಿದ ತೆಂಗು,ಅಡಿಕೆ,ಬಾಳೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 14:29 IST
Last Updated 20 ಏಪ್ರಿಲ್ 2019, 14:29 IST
ತುರುವೇಕೆರೆ ತಾಲ್ಲೂಕಿನ ಕೋಡಿಹಳ್ಳಿಯ ಮನೆಯೊಂದರ ಶೀಟ್‌ಗಳು ಗಾಳಿಗೆ ಹಾರಿವೆ.
ತುರುವೇಕೆರೆ ತಾಲ್ಲೂಕಿನ ಕೋಡಿಹಳ್ಳಿಯ ಮನೆಯೊಂದರ ಶೀಟ್‌ಗಳು ಗಾಳಿಗೆ ಹಾರಿವೆ.   

ತುರುವೇಕೆರೆ: ತಾಲ್ಲೂಕಿನ ವಿವಿಧೆಡೆ ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಮನೆಯ ಶೀಟ್‌ಗಳು, ವಿದ್ಯುತ್ ಕಂಬಗಳು, ತೆಂಗು, ಅಡಿಕೆ, ಬಾಳೆ ಮರ–ಗಿಡಗಳು ಧರೆಗುರುಳಿವೆ. ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ. ಆದರೆ ಸರಿಯಾದ ಸಮಯಕ್ಕೆ ಸ್ಥಳಕ್ಕೆ ಅಧಿಕಾರಿಗಳು ಬಂದು ಸಮಸ್ಯೆ ಆಲಿಸಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿ.ಬಿ.ಕ್ರಾಸ್ ಆಸುಪಾಸಿನ ಕೋಡಿಹಳ್ಳಿ ರಸ್ತೆ ಬದಿಯ ಮರದ ಕೊಂಬೆಗಳು ಮುರಿದು, 6 ವಿದ್ಯುತ್ ಕಂಬ ಮುರಿದಿವೆ. ಟಿ.ಸಿ ಸಮೇತ ನೆಲಕ್ಕುರುಳಿವೆ. ತೂಬಿನಕಟ್ಟೆಯಲ್ಲಿ ಮರದ ಕೊಂಬೆ ಬಿದ್ದು, ವಿದುತ್ ಲೈನ್ ತುಂಡರಿಸಿವೆ. ಸೀಗೇಹಳ್ಳಿ ರಸ್ತೆ 2, ತುರುವೇಕೆರೆ ರಸ್ತೆಯಲ್ಲಿ 2 ವಿದ್ಯುತ್ ಕಂಬಗಳು ಮುರಿದಿವೆ.

ಸೊರವನಹಳ್ಳಿ ಗೊಲ್ಲರಹಟ್ಟಿ ಮತ್ತು ಕೋಡಿಹಳ್ಳಿ ಭಾಗದಲ್ಲಿ ರೈತ ಸೀಗೇಗೌಡರ 37 ತೆಂಗಿನ ಮರಗಳು, ನಿಂಗಯ್ಯ ಅವರ 20, ಪುನೀತ್ 42, ನರಸಿಂಹ 3, ಸಣ್ಣಯ್ಯ ಅವರ 10 ಸೇರಿದಂತೆ 400ಕ್ಕೂ ಹೆಚ್ಚಿನ ತೆಂಗು, ಅಡಿಕೆ, ಬಾಳೆಯ ಗಿಡಗಳು ಗಾಳಿ ರಭಸಕ್ಕೆ ಬುಡಮೇಲಾಗಿವೆ. ಇಷ್ಟೇ ಅಲ್ಲದೆ ಸೊರವನಹಳ್ಳಿ ಗೊಲ್ಲರಹಟ್ಟಿಯ ವಯೋವೃದ್ಧೆ ತಿಮ್ಮಮ್ಮ ಅವರ ಮನೆಯ ಶೀಟ್ ಹಾರಿ ಹೋಗಿದೆ. ಮನೆಯಲ್ಲಿ ಮಳೆಯ ನೀರು ನಿಂತಿದೆ.

ADVERTISEMENT

ಕಸಬಾ ವ್ಯಾಪ್ತಿಯ ಮಾರಸಂದ್ರ ಗ್ರಾಮ ಹಾಗೂ ಹೊರ ವಲಯಗಳಲ್ಲಿ ಗಾಳಿಗೆ ಮರದ ಕೊಂಬೆ ಮುರಿದ ಬಿದ್ದು 15 ವಿದ್ಯುತ್ ಕಂಬಗಳು, ಗುಡ್ಡದಯ್ಯನ ಪಾಳ್ಯ ಮತ್ತು ರಂಗನಹಟ್ಟಿಯಲ್ಲಿ 2 ಕಂಬಗಳು ಮುರಿದಿವೆ. ಅದೇ ಗ್ರಾಮದಲ್ಲಿ 60 ತೆಂಗು, 100 ಅಡಿಕೆ, 100 ಬಾಳೆ ಗಿಡಗಳು ನೆಲಸಮವಾಗಿವೆ.

ಮಾರಸಂದ್ರದ ಸಿದ್ದಲಿಂಗಯ್ಯ, ಗಂಗಣ್ಣ, ಶಿವಲಿಂಗಯ್ಯ ಸೇರಿದಂತೆ ಇನ್ನು ಹಲವರ ಮನೆಗಳ ಶೀಟ್‌ಗಳು ಗಾಳಿಗೆ ನುಚ್ಚುನೂರಾಗಿವೆ. ಕೊಂಡಜ್ಜಿ ಕ್ರಾಸ್ ಮತ್ತು ಪುರ ರಸ್ತೆ ಬದಿಯಲ್ಲಿ ಮರ ಮುರಿದು 8 ಟ್ರಾನ್‌ಫಾರ್ಮರ್‌ಗಳ ಸ್ಟ್ರಚರ್‌ಗಳು ತುಂಡರಿಸಿವೆ.

ಸ್ಥಳಕ್ಕೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಆರ್.ಜಯರಾಮ್, ಬೆಸ್ಕಾಂ ಅಧಿಕಾರಿ ಮಾರುತಿ, ನಾರಾಯಣಪ್ಪ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.