
ತುಮಕೂರು: ರಂಗಾಯಣ ವತಿಯಿಂದ ಹಮ್ಮಿಕೊಂಡಿರುವ ‘ರಂಗ ಉತ್ಸವ’ಕ್ಕೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸೋಮವಾರ ಸಂಜೆ ಚಾಲನೆ ದೊರೆಯಿತು.
ಚಿಂತಕ ಕೆ.ದೊರೈರಾಜ್ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ರಂಗ ಚಟುವಟಿಕೆ ಹೆಚ್ಚಾಗಬೇಕು. ನಾಟಕ ಪ್ರದರ್ಶನದ ವೇಳೆ ರಂಗ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ತಿಪಟೂರು ಸತೀಶ್ ಅವರಿಗೆ ಸಮಾಜದ ಅಗತ್ಯದ ಬಗ್ಗೆ ಅರಿವಿದೆ. ಶಿಕ್ಷಕರು ಮತ್ತು ಮಕ್ಕಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಾಟಕ ರೂಪಿಸಿದ್ದಾರೆ. ಇದರಲ್ಲಿಯೇ ಅವರ ಉದ್ದೇಶ ತಿಳಿಯುತ್ತದೆ’ ಎಂದು ಹೇಳಿದರು.
ರಂಗ ಚಟುವಟಿಕೆ ವಿಸ್ತರಿಸುವಲ್ಲಿ ನಮ್ಮೆಲ್ಲರ ಜವಾಬ್ದಾರಿಯೂ ಇದೆ. ನಾಟಕ ವೀಕ್ಷಿಸುವ ಮೂಲಕ ಪ್ರೋತ್ಸಾಹ ನೀಡಬೇಕು. ರಂಗ ಉತ್ಸವ ಯಶಸ್ವಿಗೊಳಿಸಬೇಕು ಎಂದು ಆಶಿಸಿದರು.
ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ‘ಕಾಲ ಕುಟುಂಬ ಮತ್ತು ಸಮಾಜವನ್ನು ಛಿದ್ರಗೊಳಿಸಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ವಿಷ ಬೀಜ ಬಿತ್ತಿ, ಅವರನ್ನು ಬೇರೆ ರೀತಿಯಲ್ಲಿ ಧ್ರುವೀಕರಣ ಮಾಡಲಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ನಾಟಕದಿಂದ ಮಕ್ಕಳ ಕಣ್ಣಿನ ಮೂಲಕ ಕುಟುಂಬ, ಶಿಕ್ಷಕರ ಜವಾಬ್ದಾರಿ ಕುರಿತು ಅರಿವು ಮೂಡಿಸಲಾಗುತ್ತಿದೆ’ ಎಂದರು.
ಪ್ರಸ್ತುತ ಸಮಾಜ, ಮಕ್ಕಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಾಟಕ ರೂಪಿಸಲಾಗಿದೆ. ‘ಮೈ ಫ್ಯಾಮಿಲಿ’ ಈಗಾಗಲೇ 48 ಪ್ರದರ್ಶನ ಕಂಡಿದೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರದರ್ಶನ ಏರ್ಪಡಿಸಲಾಗುವುದು. ನಗರದಲ್ಲಿ 9 ಪ್ರದರ್ಶನ ಇರಲಿದ್ದು, 3 ಸಾವಿರ ಮಕ್ಕಳು ನಾಟಕ ವೀಕ್ಷಿಸಲಿದ್ದಾರೆ. ನ. 20, 21ರಂದು ಸಾರ್ವಜನಿಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಗಣೇಶ ಮಂದಾರ್ತಿ ನಿರ್ದೇಶನದ ‘ಮೈ ಫ್ಯಾಮಿಲಿ’ ನಾಟಕ ಪ್ರದರ್ಶಿಸಲಾಯಿತು. ನ. 21ರ ವರೆಗೆ ನಾಟಕೋತ್ಸವ ನಡೆಯಲಿದೆ.
ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ರಂಗಾಯಣ ಉಪ ನಿರ್ದೇಶಕ ಎಂ.ಡಿ.ಸುದರ್ಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಮಿರ್ಜಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಘುಚಂದ್ರ, ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.