
ಗುಬ್ಬಿ: ತಾಲ್ಲೂಕಿನಲ್ಲಿ ಅರ್ಹವಿರುವ ಎಲ್ಲ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಕೆಲಸ ಹೆಚ್ಚಿನ ವೇಗದಲ್ಲಿ ಸಾಗುತ್ತಿದೆ. ಈ ನಿರ್ಣಯದಿಂದ ಗ್ರಾಮಗಳಿಗೆ ಸರ್ಕಾರಿ ಸೌಲಭ್ಯ ಸರಿಯಾಗಿ ತಲುಪಲು ಸಾಧ್ಯವಾಗಲಿದೆ.
ಸರ್ವೆ ನಂಬರ್ ಪ್ರದೇಶಗಳಲ್ಲಿ ಅನೇಕ ವರ್ಷಗಳಿಂದ ಮನೆ ಕಟ್ಟಿಕೊಂಡಿದ್ದರೂ, ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದ ನಿವಾಸಿಗಳ ಸಮಸ್ಯೆ ಗಮನಿಸಿದ ಸರ್ಕಾರ, ಎಲ್ಲ ಅರ್ಹ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಸೂಚನೆ ನೀಡಿತ್ತು. ಅದರಂತೆ ತಾಲ್ಲೂಕು ಆಡಳಿತ ಕಾರ್ಯನಿರ್ವಹಿಸುತ್ತಿದೆ.
ತಾಲ್ಲೂಕಿನಲ್ಲಿ ಈಗಾಗಲೇ ಸುಮಾರು 2ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಈ ಕ್ರಮದೊಂದಿಗೆ ಗುಬ್ಬಿ ತಾಲ್ಲೂಕು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕಂದಾಯ ಗ್ರಾಮಗಳನ್ನು ರಚಿಸಿದ ತಾಲ್ಲೂಕಾಗಿದೆ.
ತಾಲ್ಲೂಕಿನ ಎಲ್ಲ ಕಂದಾಯ ವೃತ್ತಗಳಲ್ಲಿ ಅರ್ಹರಾದ ಫಲಾನುಭವಿಗಳನ್ನು ಗುರುತಿಸಿ, ದಾಖಲೆಗಳನ್ನು ಸಂಗ್ರಹಿಸಿ ಸಲ್ಲಿಸುವಂತೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ.
ತುಮಕೂರು ಉಪವಿಭಾಗೀಯ ಅಧಿಕಾರಿ ನೇತೃತ್ವದಲ್ಲಿ ವಿಚಾರಣೆ ನಡೆಸಿ, ಅರ್ಹ ಫಲಾನುಭವಿಗಳು ವಾಸಿಸುತ್ತಿರುವ ಜಾಗಗಳನ್ನು ನೋಂದಣಿ ಮಾಡಿ ಅವರಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದೆ.
ತಾಲ್ಲೂಕಿನ ಯಾವುದೇ ಗ್ರಾಮದ ಫಲಾನುಭವಿಯು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.
‘ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ, ಆದರೆ, ದಾಖಲೆ ಇಲ್ಲದೆ ಏನೂ ಸೌಲಭ್ಯ ಪಡೆಯಲಾಗುತ್ತಿರಲಿಲ್ಲ. ಈಗ ಹಕ್ಕು ಪತ್ರ ಬಂತು. ಇದು ನಮ್ಮ ಬಾಳಿಗೆ ನೆಮ್ಮದಿ ತಂದಿದೆ’ ಎಂದು ಫಲಾನುಭವಿ ಕರಿಯಪ್ಪ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.