ತುಮಕೂರು: ನಗರದಲ್ಲಿರುವ ವಿವಿಧ ಇಲಾಖೆಯ ಕಚೇರಿಗಳಿಗೆ ಸ್ವಂತ ಸೂರಿಲ್ಲವಾಗಿದ್ದು, 19 ಕಚೇರಿಗಳು ಬಾಡಿಗೆ ಕಟ್ಟಡಗಳ ಆಶ್ರಯ ಪಡೆದಿವೆ. ಇದಕ್ಕಾಗಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಹಣ ತೆರಬೇಕಾಗಿದೆ.
19 ಕಚೇರಿಗಳ ಬಾಡಿಗೆ ಪಾವತಿಗೆ ಸರ್ಕಾರ ಪ್ರತಿ ತಿಂಗಳು ₹8.55 ಲಕ್ಷ, ಒಂದು ವರ್ಷಕ್ಕೆ ₹1.02 ಕೋಟಿ ಪಾವತಿಸುತ್ತಿದೆ. ಕಾರ್ಮಿಕ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು, ಅಭಿವೃದ್ಧಿ ನಿಗಮಗಳು, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಯ ಕಚೇರಿಗಳಿಗೆ ಸ್ವಂತ ಕಟ್ಟಡ ಸೌಲಭ್ಯ ಇಲ್ಲ.
ಕೆಲವು ಕಚೇರಿಗಳು ಸರ್ಕಾರಿ ಕಟ್ಟಡದಲ್ಲಿದ್ದರೂ ಪ್ರತಿ ತಿಂಗಳು ಬಾಡಿಗೆ ಹಣ ಕಟ್ಟುವುದು ಮಾತ್ರ ತಪ್ಪುತ್ತಿಲ್ಲ. ಕೌಶಲಾಭಿವೃದ್ಧಿ ಇಲಾಖೆ ಕಚೇರಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಟ್ಟಡದಲ್ಲಿ ನಡೆಯುತ್ತಿದೆ. ಇದು ಸರ್ಕಾರಿ ಕಟ್ಟಡವೇ ಆಗಿದ್ದರೂ ಇಲಾಖೆಯಿಂದ ತಿಂಗಳಿಗೆ ₹27 ಸಾವಿರ ಬಾಡಿಗೆ ನೀಡಲಾಗುತ್ತಿದೆ. ಕಾರ್ಮಿಕ ಇಲಾಖೆಗೆ ಕಂದಾಯ ಇಲಾಖೆಯ ನೌಕರರ ಸಂಘದ ಕಟ್ಟಡ ಬಿಟ್ಟುಕೊಟ್ಟಿದ್ದು, ₹15 ಸಾವಿರ ಬಾಡಿಗೆ ನಿಗದಿ ಪಡಿಸಲಾಗಿದೆ.
ಶೈಕ್ಷಣಿಕ ನಗರಿ ಎಂದು ಕರೆಸಿಕೊಳ್ಳುವ ತುಮಕೂರಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ತನ್ನದೇ ಆದ ಸ್ವಂತ ಕಟ್ಟಡವಿಲ್ಲ. ಈ ಹಿಂದೆ ಜೂನಿಯರ್ ಕಾಲೇಜು ಬಳಿ ಚಿಕ್ಕ ಕೊಠಡಿಯಲ್ಲಿ ಇಲಾಖೆಯ ಕೆಲಸಗಳು ನಡೆಯುತ್ತಿದ್ದವು. ಈಚೆಗೆ ಕೇಂದ್ರ ಗ್ರಂಥಾಲಯದ ಹಳೆಯ ಕಟ್ಟಡಕ್ಕೆ ಕಚೇರಿ ಸ್ಥಳಾಂತರಿಸಿದ್ದು, ಇನ್ನಷ್ಟೇ ಬಾಡಿಗೆ ನಿಗದಿಪಡಿಸಬೇಕಿದೆ.
ಅಬಕಾರಿ ಬಲು ದುಬಾರಿ: ಬಾಡಿಗೆ ಕಟ್ಟಡದಲ್ಲಿರುವ ವಿವಿಧ ಇಲಾಖೆಯ ಕಚೇರಿಗಳ ಪೈಕಿ ಅಬಕಾರಿ ಇಲಾಖೆ ಕಚೇರಿ ಬಾಡಿಗೆ ಬಲು ದುಬಾರಿಯಾಗಿದೆ. ಕುವೆಂಪು ನಗರದಲ್ಲಿರುವ ಕಟ್ಟಡಕ್ಕೆ ತಿಂಗಳಿಗೆ ₹1.65 ಲಕ್ಷ ಬಾಡಿಗೆ ಕಟ್ಟಲಾಗುತ್ತಿದೆ. ಕಳೆದ ಕೆಲವು ವರ್ಷಗಳ ಹಿಂದೆ ಕಚೇರಿಯನ್ನು ಈ ಕಟ್ಟಡಕ್ಕೆ ಸ್ಥಳಾಂತರಿಸಿದ್ದು, ಅಲ್ಲಿಂದ ಈವರೆಗೂ ಪ್ರತಿ ತಿಂಗಳು ಬಾಡಿಗೆ ಕಟ್ಟಲಾಗುತ್ತಿದೆ.
ಉದ್ಯೋಗ ಮತ್ತು ತರಬೇತಿ ಇಲಾಖೆಯ ಕಚೇರಿಯನ್ನು ಡಯಟ್ ಆವರಣದಿಂದ ಎಸ್.ಎಸ್.ಪುರಂಗೆ ಸ್ಥಳಾಂತರಿಸಲಾಗಿದೆ. ಪ್ರಮುಖ ಇಲಾಖೆಗಳು ಒಂದು ಕಡೆ ನೆಲೆ ನಿಲ್ಲುತ್ತಿಲ್ಲ. ಇದರಿಂದ ಯುವಕರು, ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ದೂರದ ಊರುಗಳಿಂದ ನಗರಕ್ಕೆ ಬರುವವರಿಗೆ ಕಚೇರಿ ಹುಡುಕುವುದೇ ದೊಡ್ಡ ಸವಾಲಾಗಿದೆ.
‘ಸರ್ಕಾರದಿಂದಲೇ ಕಟ್ಟಡ ನಿರ್ಮಿಸಿ, ಇಲಾಖೆಗಳಿಗೆ ಹಂಚಿಕೆ ಮಾಡಿದ್ದರೆ ಕೋಟ್ಯಂತರ ರೂಪಾಯಿ ಸರ್ಕಾರಕ್ಕೆ ಉಳಿತಾಯವಾಗುತಿತ್ತು. ಲಭ್ಯ ಇರುವ, ನಿರ್ವಹಣೆ ಇಲ್ಲದೆ ಹಾಳಾದ ಕಟ್ಟಡ ಸರಿಪಡಿಸಿ ಉಪಯೋಗಕ್ಕೆ ನೀಡಿದ್ದರೆ ಹಣ ಪೋಲಾಗುವುದನ್ನು ತಡೆಯಬಹುದಿತ್ತು. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ, ನಿರ್ಲಕ್ಷ್ಯದಿಂದ ಕೋಟ್ಯಂತರ ರೂಪಾಯಿ ಬಾಡಿಗೆ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ನಗರದ ರಾಮರಾಜು ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಸರ್ಕಾರಿ ಕಚೇರಿಗಳು
ಅಬಕಾರಿ ಕಚೇರಿಗೆ ₹1.65 ಲಕ್ಷ ನಿಗಮದ ಕಚೇರಿಗಿಲ್ಲ ಸ್ವಂತ ಕಟ್ಟಡ ಸರ್ಕಾರಿ ಕಟ್ಟಡಕ್ಕೂ ಬಾಡಿಗೆ ನಿಗದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.