ADVERTISEMENT

ತುಮಕೂರು: ಏದುಸಿರು ಬಿಡುತ್ತಿದೆ ಗ್ರಾಮೀಣ ಕೈಗಾರಿಕೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 7:01 IST
Last Updated 23 ಡಿಸೆಂಬರ್ 2025, 7:01 IST
ತುಮಕೂರಿನ ಗ್ರಾಮೀಣ ಕೈಗಾರಿಕಾ ಇಲಾಖೆ ಕಚೇರಿ
ತುಮಕೂರಿನ ಗ್ರಾಮೀಣ ಕೈಗಾರಿಕಾ ಇಲಾಖೆ ಕಚೇರಿ   

ತುಮಕೂರು: ಗ್ರಾಮೀಣ ಕೈಗಾರಿಕಾ ಇಲಾಖೆ ಸಿಬ್ಬಂದಿ ಕೊರತೆಯಿಂದ ಬಡವಾಗಿದ್ದು, ಕೇವಲ ನಗರಕ್ಕೆ ಸೀಮಿತವಾಗಿದೆ. ತಾಲ್ಲೂಕು ಕೇಂದ್ರಗಳಲ್ಲಿ ಇಲಾಖೆ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

ಇಲಾಖೆಯಿಂದ ಪ್ರತಿ ತಾಲ್ಲೂಕಿಗೆ ಒಬ್ಬರು ಕೈಗಾರಿಕಾ ವಿಸ್ತರಣಾಧಿಕಾರಿಯನ್ನು ನಿಯೋಜಿಸಲಾಗಿತ್ತು. ಕಳೆದ 7 ವರ್ಷಗಳಿಂದ 10 ತಾಲ್ಲೂಕುಗಳಲ್ಲಿ ವಿಸ್ತರಣಾಧಿಕಾರಿ ಹುದ್ದೆಗಳು ಖಾಲಿ ಉಳಿದಿವೆ. ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಇಲಾಖೆ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಉಸಿರಾಡುತ್ತಿದೆ. ಗ್ರಾಮೀಣ ಭಾಗದ ಜನರು ಇಲಾಖೆಯಿಂದ ಏನೇ ಕೆಲಸ ಆಗಬೇಕಿದ್ದರೂ ಮುಖ್ಯ ಕಚೇರಿ ಹುಡುಕಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮೀಣ ಕೈಗಾರಿಕಾ ಇಲಾಖೆಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಪ್ರತಿ ವರ್ಷ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಬಡಗಿ, ಗಾರೆ ಕೆಲಸ, ಕಮ್ಮಾರಿಕೆ, ದೋಬಿ, ಕ್ಷೌರಿಕ, ಚಮ್ಮಾರಿಕೆ, ಕಲ್ಲು ಕೆಲಸ ಸೇರಿದಂತೆ ಇತರೆ ಕುಶಲ ಕರ್ಮಿಗಳಿಗೆ ಇಲಾಖೆಯಿಂದ ನೆರವು ನೀಡಲಾಗುತ್ತಿದೆ. ಕುಶಲ ಕರ್ಮಿಗಳು ವೃತ್ತಿ ಮುಂದುವರಿಸಿಕೊಂಡು ಹೋಗಲು ಸಾಲ, ವೃತ್ತಿ ಆಧಾರಿತ ಉಪಕರಣ ಒದಗಿಸಲಾಗುತ್ತದೆ. ಹಳ್ಳಿ ಭಾಗದ ಗುಡಿ ಕೈಗಾರಿಕೆಗಳ ಉತ್ತೇಜನಕ್ಕಾಗಿ ಆರಂಭಿಸಿದ್ದ ಇಲಾಖೆ ಏದುಸಿರು ಬಿಡುತ್ತಾ ಸಾಗಿದೆ.

ADVERTISEMENT

ಜಿಲ್ಲಾ ಕಚೇರಿಯಲ್ಲಿ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು, ಪ್ರಥಮ ದರ್ಜೆ ಸಹಾಯಕರು ಕಾಯಂ ಆಗಿ ಕೆಲಸ ಮಾಡುತ್ತಿದ್ದಾರೆ. ಗ್ರೂಪ್‌–ಡಿ ಮತ್ತು ಡಾಟಾ ಎಂಟ್ರಿ ಆಪರೇಟರ್‌ ಅವರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ತಾಲ್ಲೂಕು ವಿಸ್ತರಣಾಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ ನಂತರ ಇಲಾಖೆ ಪ್ರತಿನಿಧಿಸುವವರು ಇಲ್ಲದಂತಾಗಿದೆ.

ಕುಶಲ ಕರ್ಮಿಗಳು ಸಣ್ಣ ನೆರವಿಗೂ ನಗರಕ್ಕೆ ಬರುತ್ತಿದ್ದಾರೆ. ಗಡಿಭಾಗ ಶಿರಾ, ಪಾವಗಡ ಸೇರಿದಂತೆ ಗಡಿ ಭಾಗದ ಕುಶಲ ಕರ್ಮಿಗಳಿಗೆ ತಾಲ್ಲೂಕು ಮಟ್ಟದಲ್ಲಿಯೇ ಸರ್ಕಾರದ ಸಹಾಯ ಸಿಗುವಂತಾಗಬೇಕು. ಆದರೆ ಇಲ್ಲಿ ಅಂತಹ ಕೆಲಸಗಳು ಆಗುತ್ತಿಲ್ಲ. ನೂರಾರು ಕಿಲೊ ಮೀಟರ್‌ ಕ್ರಮಿಸಿ ನಗರಕ್ಕೆ ಬರುವಂತಾಗಿದೆ. ನೆರವಿಗಾಗಿ ಹರಸಾಹಸ ಪಡುತ್ತಿದ್ದಾರೆ.

ಅಧಿಕಾರಿ, ಸಿಬ್ಬಂದಿ ಕೊರತೆ ಮಧ್ಯೆಯೂ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಹಾಯಧನ, ಸಲಕರಣೆಗಳ ಕಿಟ್‌ ನೀಡಲಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ 1,451 ಮಂದಿಗೆ ಕಿಟ್‌ ಕೊಡಲಾಗಿದೆ. 180 ಜನ ಸಾಲ ಸೌಲಭ್ಯ ಪಡೆದಿದ್ದಾರೆ. ನಿರೀಕ್ಷೆ ಮೀರಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಗುರುತಿಸುವ ಕೆಲಸ ಇಲಾಖೆಯಿಂದ ಆಗುತ್ತಿದೆ.

ಓಬಿರಾಯನ ಕಾಲದ ಯೋಜನೆ

‘ಗ್ರಾಮೀಣ ಕೈಗಾರಿಕಾ ಇಲಾಖೆಯಿಂದ ಕುಶಲ ಕರ್ಮಿಗಳು ಎರಡು ಯೋಜನೆಗಳಲ್ಲಿ ಸೌಲಭ್ಯ ಪಡೆಯಬಹುದು. ಉಚಿತವಾಗಿ ಸುಧಾರಿತ ಸಲಕರಣೆ ವಿತರಿಸಲಾಗುತ್ತದೆ. ಆದರೆ ಒಂದು ಸಲಕರಣೆ ಕಿಟ್‌ಗೆ ಕೇವಲ ₹8 ಸಾವಿರ ಮಾತ್ರ ವ್ಯಯಿಸಲಾಗುತ್ತಿದೆ. ಇಷ್ಟು ಕಡಿಮೆ ಹಣದಲ್ಲಿ ಗುಣಮಟ್ಟದ ಕಿಟ್‌ ಕೊಡಲು ಹೇಗೆ ಸಾಧ್ಯ?’ ಎಂದು ಪಾವಗಡ ತಾಲ್ಲೂಕಿನ ತಿರುಮಣಿಯ ಅನಿಲ್‌ ಪ್ರಶ್ನಿಸುತ್ತಾರೆ. ಬ್ಯಾಂಕ್‌ಗಳ ಮುಖಾಂತರ ನೀಡುತ್ತಿರುವ ಸಾಲವೂ ಸಾಲದಾಗಿದೆ. ₹30 ಸಾವಿರ ಸಾಲ ಇಲಾಖೆಯಿಂದ ₹10 ಸಾವಿರ ಸಹಾಯ ಧನ ನಿಗದಿ ಪಡಿಸಲಾಗಿದೆ. ಇಷ್ಟು ಕಡಿಮೆ ಹಣದಲ್ಲಿ ಏನು ಮಾಡಲು ಆಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.