ತುರುವೇಕೆರೆ: ಪಟ್ಟಣದ ಸತ್ಯಗಣಪತಿಯನ್ನು ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ತುರುವೇಕೆರೆ ಕೆರೆಯಲ್ಲಿ ತೆಪ್ಪೋತ್ಸವದ ಮೂಲಕ ಮಂಗಳವಾರ ಸಂಜೆ ವಿಸರ್ಜನೆ ಮಾಡಲಾಯಿತು.
ಗಣಪತಿಯನ್ನು ಗೌರಿ ಗಣೇಶ ಹಬ್ಬದ ದಿನ ಪ್ರತಿಷ್ಠಾಪಿಸಲಾಗಿತ್ತು. ದಿನನಿತ್ಯ ಪೂಜಾ ಕಾರ್ಯಗಳು ನಡೆಯುತ್ತಿದ್ದವು. ಜಾತ್ರೆಯ ಅಂಗವಾಗಿ ಕಳೆದ ಹದಿನೈದು ದಿನಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತ್ತು. ಅಂಗಡಿ ಮಾಲೀಕರು ತಮ್ಮ ಅಂಗಡಿಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದರು.
ಸೋಮವಾರ ಸಂಜೆ ಪುಷ್ಪ ಮಂಟಪದ ವಿಶೇಷ ಅಲಂಕಾರದೊಂದಿಗೆ ಸತ್ಯಗಣಪತಿ ಹಾಗೂ ಗ್ರಾಮ ದೇವತೆ ಉಡಿಸಲಮ್ಮ ದೇವಿಯನ್ನು ಕುಳ್ಳಿರಿಸಿ ರಾಜ ಬೀದಿಗಳಲ್ಲಿ ಉತ್ಸವ ಮಾಡಲಾಯಿತು.
ಮೆರವಣಿಗೆ ವೇಳೆ ಕೀಲು ಕುದುರೆ, ಚೆಂಡೆವಾದ್ಯ, ಹುಲಿವೇಷಧಾರಿಗಳ ನೃತ್ಯ ಪ್ರದರ್ಶನ, ಡಿಜಿ ಸೌಂಡ್, ಡೊಳ್ಳು ಕುಣಿತ, ನಾಸಿಕ್ ಬ್ಯಾಂಡ್ ಸೇರಿದಂತೆ ಹಲವಾರು ಜಾನಪದ ಕಲಾ ತಂಡಗಳು ಜಾತ್ರೆಗೆ ಮೆರುಗು ತಂದಿದ್ದವು.
ಸಂಜೆ ಮಹಾ ಮಂಗಳಾರತಿಯೊಂದಿಗೆ ಕೆರೆಯಲ್ಲಿ ಸತ್ಯಗಣಪತಿಯನ್ನು ತೆಪ್ಪದಲ್ಲಿ ಕುಳ್ಳಿರಿಸಿ ಸಿಡಿಮದ್ದು ಸಿಡಿಸುವುದರೊಂದಿಗೆ ವಿಸರ್ಜಿಸಲಾಯಿತು.
ಶಾಸಕ ಎಂ.ಟಿ.ಕೃಷ್ಣಪ್ಪ, ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ ಸತೀಶ್, ಟಿ.ಎನ್.ರಘು, ಸಂಗಲಾಪುರ ಶಿವಣ್ಣ, ಅಶೋಕ್, ಮೆಕಾನಿಕ್ ಉಮೇಶ್, ಶಶಾಂಕ್, ಸ್ಟುಡಿಯೋ ಅಭಿ, ಉಪ್ಪಿ, ಮಂಜುನಾಥ್, ಲಕ್ಷ್ಮಣ್, ದರ್ಶನ್, ನಂದಕುಮಾರ್, ಶ್ರೀಧರ್, ಶಶಿಕುಮಾರ್, ಆಶಾ, ಮೋಹನ್, ನಿತಿನ್, ಶಾಮಣ್ಣ, ಗುರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.