
ಮಧುಗಿರಿ: ತಾಲ್ಲೂಕಿನ ಕಸಬಾ ಹೋಬಳಿ ಬಸವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಪ್ರಾರಂಭಕ್ಕೆ ಗ್ರಾಮಸ್ಥರು ಹಾಗೂ ಶಿಕ್ಷಕರು ತಮ್ಮ ಮಕ್ಕಳನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ಮೂಲಕ ಶುಕ್ರವಾರ ಶಾಲೆಗೆ ಕರೆ ತಂದರು. ಮಕ್ಕಳು ಎತ್ತಿನ ಗಾಡಿಯಲ್ಲಿ ಬರುವಾಗ ಕೇಕೆ ಹಾಕಿ ಸಂಭ್ರಮಿಸಿದರು.
ಎಲ್ಲ ಶಾಲೆಗಳಲ್ಲಿ ರಂಗೋಲಿ ಹಾಕಿ ಹಸಿರು ತಳಿರು ತೋರಣ ಕಟ್ಟಿ ಮಕ್ಕಳನ್ನು ಸ್ವಾಗತಿಸಲಾಯಿತು. ಬಸವನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ತಾಯಂದಿರಿಗೆ ಪಾದ ಪೂಜೆ ಮಾಡಿಸಲಾಯಿತು. ಮಕ್ಕಳು ಹಾಗೂ ಗ್ರಾಮಸ್ಥರಿಗೆ ಹೋಳಿಗೆ ಊಟ ಮಾಡಿಸಿದ್ದರು. ಶಾಲೆಯಲ್ಲಿ ಮಕ್ಕಳಿಂದ ಶಾರದಾ ಪೂಜೆ ಮಾಡಿಸಿ, ಪಾಠ ಪ್ರವಚನ ಪ್ರಾರಂಭಿಸಲಾಯಿತು.
ಶಾಲೆ ಪ್ರವೇಶದ ದ್ವಾರದಲ್ಲಿ ‘ದಾಖಲಾತಿ ಆಂದೋಲನ’ಕ್ಕೆ ಪೋಷಕರ ಸೆಲ್ಫಿ ಪಾಯಿಂಟ್ ಅತ್ಯಾಕರ್ಷಣಿಯವಾಗಿತ್ತು. ಮಕ್ಕಳು ಹಾಗೂ ಗ್ರಾಮಸ್ಥರು ಸೆಲ್ಫಿ ತೆಗೆದುಕೊಂಡರು.
ಡಿಡಿಪಿಐ ಕಚೇರಿ ಶಿಕ್ಷಣಾಧಿಕಾರಿ ಶಾಂತಲಾ, ಡಯಟ್ ಪ್ರಾಂಶುಪಾಲ ಗಂಗಾಧರ್, ಚಿತ್ತಯ್ಯ, ಕಾಟಲಿಂಗಪ್ಪ, ಬಿಆರ್‌ಪಿ ನೇತ್ರಾವತಿ, ಅಡವೀಶ್, ಶಾಂತಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಕಾಂತರಾಜು, ಹಳೆ ವಿದ್ಯಾರ್ಥಿಗಳ ಸಂಘದ ಶಿವಲಿಂಗಪ್ಪ, ಮಂಜುನಾಥ್, ಮಾಲಿಂಗ, ಶಿಕ್ಷಕ ಎಸ್.ವಿ. ರಮೇಶ್, ಗ್ರಾಮಸ್ಥರಾದ ಜೆ.ಪಿ ಮಂಜುನಾಥ್, ಹನುಮಂತರಾಯಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.