ADVERTISEMENT

ದೇವೇಗೌರಿಗೆ ಅಪಮಾನ: ಬಿಜೆಪಿ, ಜೆಡಿಎಸ್ ಕಿಡಿ

ದೇವೇಗೌಡರಿಗೆ ಭದ್ರತೆ ನೀಡದ ಪೊಲೀಸರು; ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 6:23 IST
Last Updated 17 ಏಪ್ರಿಲ್ 2024, 6:23 IST
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಬಿಜೆಪಿ, ಜೆಡಿಎಸ್ ಮಹಿಳಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಬಿಜೆಪಿ, ಜೆಡಿಎಸ್ ಮಹಿಳಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು   

ತುಮಕೂರು: ನಗರದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವಿರುದ್ಧ ಧಿಕ್ಕಾರ ಕೂಗಿ ಅವಮಾನಿಸಿದ ಕಾಂಗ್ರೆಸ್ ಕಾರ್ಯಕರ್ತರು, ಭದ್ರತೆ ಒದಗಿಸುವಲ್ಲಿ ಲೋಪವೆಸಗಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಡಿಎಸ್, ಬಿಜೆಪಿ ಮುಖಂಡರು ಒತ್ತಾಯಿಸಿದರು.

ಎರಡೂ ಪಕ್ಷಗಳ ಮಹಿಳಾ ಕಾರ್ಯಕರ್ತೆಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು. ಸಭೆಗೆ ನುಗ್ಗಿದ್ದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಜಾಮೀನು ಸಿಗದ ರೀತಿಯ ಪ್ರಕರಣ ದಾಖಲಿಸಬೇಕು. ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ನಗರದ ಕುಂಚಿಟಿಗರ ಸಮುದಾಯ ಭವನದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಎಚ್.ಡಿ.ದೇವೇಗೌಡ, ಎರಡೂ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಸಭೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿ, ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡಿದ್ದರು. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಇಂತಹ ಕೆಲಸಕ್ಕೆ ಇಳಿದಿದ್ದಾರೆ. ಮಾಜಿ ಪ್ರಧಾನಿಗೆ ಭದ್ರತೆ ನೀಡದ ಪೊಲೀಸರ ಲೋಪ ಎದ್ದುಕಾಣುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ನಮ್ಮ ಸಭೆಗೆ ನುಗ್ಗಿ ಕಾಂಗ್ರೆಸ್‍ನವರು ಅಡ್ಡಿ ಮಾಡಬಹುದೆಂದು ಮೊದಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೂ ನುಗ್ಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಒಂದು ವೇಳೆ ಗೃಹ ಸಚಿವ ಜಿ.ಪರಮೇಶ್ವರ ಭಾಗವಹಿಸಿದ್ದ ಸಭೆಗೆ ಯಾರಾದರೂ ನುಗ್ಗಿ, ಅಡ್ಡಿಪಡಿಸಿದ್ದರೆ ಪೊಲೀಸರು ಸುಮ್ಮನೆ ಇರುತ್ತಿದ್ದರೆ? ಪೊಲೀಸರು ತಾರತಮ್ಯದಿಂದ ನಡೆದುಕೊಳ್ಳುತ್ತಿದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜನಪ್ಪ, ‘ಸಭೆಯಲ್ಲಿ ಅಡ್ಡಿಪಡಿಸಲು ಕಾಂಗ್ರೆಸ್‍ನವರು ಹೆಣ್ಣು ಮಕ್ಕಳನ್ನು ಕಳುಹಿಸಿರುವುದು ದುರದೃಷ್ಟಕರ. ಇದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮುಖಂಡರಾದ ಎಸ್.ಶಿವಪ್ರಸಾದ್, ಬ್ಯಾಟರಂಗೇಗೌಡ, ಹನುಮಂತರಾಜು, ವಿಜಯ್‍ಗೌಡ, ಎಚ್.ಟಿ.ಚಂದ್ರಶೇಖರ್, ಬೆಳ್ಳಿ ಲೋಕೇಶ್, ಶ್ರೀನಿವಾಸಪ್ರಸಾದ್, ಟಿ.ಜಿ.ನರಸಿಂಹರಾಜು, ಎಸ್.ಪಿ.ಚಿದಾನಂದ್, ಸೋಲಾರ್ ಕೃಷಮೂರ್ತಿ, ರಂಗನಾಥ್, ಮುದಿಮಡು ರಂಗಸ್ವಾಮಯ್ಯ, ಭೈರೇಶ್, ರೇಖಾರಾಜು, ಪ್ರೇಮಾ ಹೆಗಡೆ, ವಿಜಯ ಭಾಸ್ಕರ್, ತಾಹೇರಾ ಕುಲ್ಸಂ, ಜ್ಯೋತಿ ತಿಪ್ಪೇಸ್ವಾಮಿ, ಲಕ್ಷ್ಮಮ್ಮ, ಯಶೋದ, ರಾಧಮ್ಮ, ಡಾ.ಫರ್ಜಾನಾ, ಉಷಾ, ರಾಧಾ ಗಂಗಾಧರ್, ಆದ್ಯ ಇತರರು ಭಾಗವಹಿಸಿದ್ದರು.

ಎಚ್.ಡಿ.ದೇವೇಗೌಡ ಸಭೆಗೆ ಅಡ್ಡಿಪಡಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಬಿಜೆಪಿ ಕಾನೂನು ಘಟಕಗಳ ಪದಾಧಿಕಾರಿಗಳು ಮಂಗಳವಾರ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಬಿಜೆಪಿ ಕಾನೂನುಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜು ಪ್ರಮುಖರಾದ ಡಿ.ಸಿ.ಹಿಮಾನಂದ್ ಕೆ.ಪಿ.ವಿಶ್ವನಾಥ್ ರೇಖಾ ಮುಖಂಡರಾದ ರೇಣುಕೇಶ್ ಪ್ರಕಾಶ್ ಆತ್ಮಾ ಹಿರೇಮಠ್ ರಮೇಶ್ ಸುಲ್ತಾನ್‍ಪುರ್ ನವೀನ್‍ಚಂದ್ರ ಶೆಟ್ಟಿ ಮೊದಲಾದವರು ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.