ADVERTISEMENT

ಶನೈಶ್ಚರಸ್ವಾಮಿ: ರಥೋತ್ಸವ ನಾಳೆ

ಕುಣಿಗಲ್ ತಾಲ್ಲೂಕಿನ ಕೊಪ್ಪ ಗ್ರಾಮ; ಬ್ರಹ್ಮ ರಥೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 2:30 IST
Last Updated 10 ಮಾರ್ಚ್ 2021, 2:30 IST
ತಾಲ್ಲೂಕು ಕೊಪ್ಪದ (ಮಾಗಡಿಪಾಳ್ಯ) ಶನೇಶ್ಚರ ಸ್ವಾಮಿ ದೇವಾಲಯ
ತಾಲ್ಲೂಕು ಕೊಪ್ಪದ (ಮಾಗಡಿಪಾಳ್ಯ) ಶನೇಶ್ಚರ ಸ್ವಾಮಿ ದೇವಾಲಯ   

ಕುಣಿಗಲ್‌: ತಾಲ್ಲೂಕಿನ ಕೊಪ್ಪ ಗ್ರಾಮದ ಶನೈಶ್ಚರಸ್ವಾಮಿ ದೇವಾಲಯ ಧಾರ್ಮಿಕ, ಸಾಮಾಜಿಕ ಕಾರ್ಯಗಳ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ಷೇತ್ರ. ಕ್ಷೇತ್ರದಲ್ಲಿ ಕಲೆಗೂ ಪ್ರೋತ್ಸಾಹ ನೀಡಲಾಗುತ್ತಿದೆ

ಎಡೆಯೂರು ಹೋಬಳಿಯ ಮಾಗಡಿಪಾಳ್ಯ ಕೊಪ್ಪ ಗ್ರಾಮದ ಗಂಗಯ್ಯ– ಜಯಮ್ಮ ದಂಪತಿ ಮೊದಲಿಗೆ ಮನೆಯಲ್ಲಿಯೇ ದೇವಾಲಯ ನಿರ್ಮಿಸಿ ಶನೈಶ್ಚರ ಸ್ವಾಮಿ ಪೂಜೆಯನ್ನು ಶ್ರದ್ಧೆ ಭಕ್ತಿಯಿಂದ ಮಾಡುತ್ತಿದ್ದರು. ಅವರ ಮರಣದ ನಂತರ ಸಹೋದರ ಹುಚ್ಚೇಗೌಡ ಪೂಜೆ ಮುಂದುವರಿಸಿದ್ದರು.

ಮನೆಯಲ್ಲಿ ಪೂಜೆ ಮಾಡುವುದರ ಬದಲು ಪ್ರತ್ಯೇಕ ದೇವಾಲಯ ನಿರ್ಮಿಸಲು ನಿರ್ಧರಿಸಿದ ಇವರು, ಇದ್ದ ಸ್ವಲ್ಪ ಜಮೀನಿನಲ್ಲಿ ದೇವಾಲಯ ನಿರ್ಮಾಣಕ್ಕೆ ಸಂಕಲ್ಪ ಕೈಗೊಂಡರು. ಗ್ರಾಮಸ್ಥರು ಕೈಜೋಡಿಸಿ ಜಾಗ ನೀಡಿದ ಪರಿಣಾಮ ಹತ್ತುವರ್ಷಗಳ ಹಿಂದೆ ಹೊಸ ದೇವಾಲಯ ನಿರ್ಮಿಸಿದ್ದಾರೆ.

ADVERTISEMENT

ಭಕ್ತರ ಸಹಕಾರದಿಂದ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆದು ಕೊಪ್ಪ ದೇವಾಲಯ ಭಕ್ತರ ಮನೋಭಿಲಾಷೆ ಈಡೇರಿಸುವ ಪವಿತ್ರ ಕ್ಷೇತ್ರವಾಗಿದೆ. ಹತ್ತು ವರ್ಷಗಳಿಂದ ಶಿವರಾತ್ರಿ ದಿನ ರಥೋತ್ಸವ ಮತ್ತು ಕಾರ್ತಿಕ ಮಾಸದಲ್ಲಿ ದೀಪೋತ್ಸವ, ಗ್ರಾಮ ದೇವರಾದ ಆಂಜನೇಯಸ್ವಾಮಿ ಪಲ್ಲಕಿ ಉತ್ಸವ ನಡೆಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ರಾಜ್ಯದ ನಾನಾ ಭಾಗಗಳ ಭಕ್ತರು ಪಾಲ್ಗೊಳ್ಳುವರು.

ಧಾರ್ಮಿಕ ಕಾರ್ಯಕ್ರಮಗಳ ಜತೆ ಪ್ರತಿ ಶನಿವಾರ ಅನ್ನದಾಸೋಹ ನಡೆಸಿಕೊಂಡು ಬರಲಾಗುತ್ತಿದೆ. ಕಾರ್ತಿಕ ದೀಪೋತ್ಸವ ಅಂಗವಾಗಿ ಸ್ಥಳೀಯ ಕಲಾ ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ‘ರಾಜಸತ್ಯವ್ರತ’, ‘ಸಂಪೂರ್ಣ ರಾಮಾಯಣ’, ‘ಶನೈಶ್ಚರ ಕಲ್ಯಾಣ’, ‘ರಾಜವಿಕ್ರಮಾದಿತ್ಯ’ ಮತ್ತು ‘ಗಂಗೆ ಗೌರಿ’ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ದೇವಾಲಯ ಸಮಿತಿಯ ಸದಾನಂದ್ ತಿಳಿಸಿದರು.

‘ಕೊಪ್ಪ ಶನೈಶ್ಚರ ಸ್ವಾಮಿ ದೇವಾಲಯ, ಭಕ್ತರ ಸಂಕಷ್ಟಗಳನ್ನು ಸಮರ್ಪಿಸಿ, ಸಂತೃಪ್ತಿ ಸಮಾಧಾನ ಪಡೆಯುತ್ತಿರುವ ಕ್ಷೇತ್ರವಾದ ಕಾರಣ ನಾವು ಬಂದು ಪೂಜೆ ಸಲ್ಲಿಸಿ ಸಂತೃಪ್ತಿ ಪಡೆಯುತ್ತಿದ್ದೇವೆ’ ಎಂದು ಬೆಂಗಳೂರಿನ ಭಕ್ತ ನಾಗೇಂದ್ರಪ್ಪ ಕುಟುಂಬದವರು, ರಾಮಚಂದ್ರ ಯಶೋಧಮ್ಮ, ನಾಗಸಂದ್ರ ಭೀಮ ಕೇಶವಮೂರ್ತಿ ಅನಸೂಯ ಹೇಳಿದರು.

ಭಕ್ತರ ಸಹಕಾರದಲ್ಲಿ ಈ ಕ್ಷೇತ್ರ ಬೆಳೆಯುತ್ತಿದೆ. ಭಕ್ತರಿಂದ ಹರಕೆ, ಕಾಣಿಕೆ ರೂಪದಲ್ಲಿ ಯಾವುದೇ ಹಣ ವಸೂಲಿ ಮಾಡುವುದಿಲ್ಲ. ಅವರ ಅಭಿಲಾಷೆಯಂತೆ ಧಾರ್ಮಿಕ ಕಾರ್ಯ ನಡೆಸಲಾಗುತ್ತಿದೆ. ಭಕ್ತರಿಗೆ ಮೂಲಸೌಕರ್ಯ ಮತ್ತು ಸಮುದಾಯಭವನ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದು ಪ್ರಧಾನ ಅರ್ಚಕ ಹುಚ್ಚೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.