
ತುಮಕೂರು: ನಗರದ ಸಿದ್ಧಗಂಗಾ ಮಠದಲ್ಲಿ ಸಿದ್ಧಗಂಗಾ ಜಾತ್ರೆಯ ಪ್ರಯುಕ್ತ ಫೆ. 6ರಿಂದ 20ರ ವರೆಗೆ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಫೆ. 16ರಂದು ರಥೋತ್ಸವ ನಡೆಯಲಿದೆ.
ಫೆ. 6ರಂದು ಸಂಜೆ 6.30 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಶಿವಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಬಿ.ಸುರೇಶ್‌ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಸ್ತು ಪ್ರದರ್ಶನ ಟ್ರಸ್ಟ್ ಕಾರ್ಯದರ್ಶಿ ಬಿ.ಗಂಗಾಧರಯ್ಯ ಇಲ್ಲಿ ಬುಧವಾರ ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ 21 ಮಳಿಗೆ, ಗೃಹೋಪಯೋಗಿ ಹಾಗೂ ಆಹಾರ ಪದಾರ್ಥಗಳು ಸೇರಿದಂತೆ 175 ಖಾಸಗಿ ಮಳಿಗೆ ಒಳಗೊಂಡಂತೆ ಒಟ್ಟು 195 ಮಳಿಗೆ ಆರಂಭಿಸಲಾಗುತ್ತದೆ. ಮಠದ ಆವರಣದಲ್ಲಿ 1964ರಿಂದ ವಸ್ತು ಪ್ರದರ್ಶನ ಸುಸೂತ್ರವಾಗಿ ನಡೆಯುತ್ತಿದೆ. ವಸ್ತು ಪ್ರದರ್ಶನಕ್ಕೆ ಕೈಗಾರಿಕಾ ಇಲಾಖೆಯಿಂದ ₹2 ಲಕ್ಷ ಅನುದಾನ ನೀಡಲಾಗುತ್ತಿತ್ತು, ಈ ಬಾರಿ ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡುತ್ತಿದ್ದ ಅನುದಾನ ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ವಸ್ತು ಪ್ರದರ್ಶನ ಟ್ರಸ್ಟ್ ಜಂಟಿ ಕಾರ್ಯದರ್ಶಿ ಕೆಂ.ಬಾ.ರೇಣುಕಯ್ಯ, ‘20 ದಿನಗಳ ಕಾಲ 31 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 13 ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ. ದನಗಳ ಜಾತ್ರೆಗೆ 112 ವರ್ಷ ತುಂಬಿದ್ದು, ಮುಂದಿನ ಮೂರು ತಿಂಗಳಲ್ಲಿ ದನಗಳ ಜಾತ್ರೆಯ ವಜ್ರ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದರು.
ಸಿದ್ಧಗಂಗಾ ಮಠದ ಎಸ್.ವಿಶ್ವನಾಥಯ್ಯ, ಬಿ.ಗಂಗಾಧರಯ್ಯ, ಎಸ್.ಶಿವಕುಮಾರ್, ಆನಂದ್, ಉಮಾಮಹೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.