ADVERTISEMENT

ಶಿರಾ: ದಿಢೀರ್ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

ಆಸ್ಪತ್ರೆ, ಕಾಲೇಜು, ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 4:14 IST
Last Updated 16 ಜುಲೈ 2024, 4:14 IST
ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು    

ಶಿರಾ: ತಾಲ್ಲೂಕಿನ ಚಿಕ್ಕನಹಳ್ಳಿ ಮೊರಾರ್ಜಿ ವಸತಿ ಶಾಲೆ, ಯಲಿಯೂರು ಗ್ರಾಮ ಹಾಗೂ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ತಾಯಿ ಮತ್ತು ಮಗು ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಪಶು ಆಸ್ಪತ್ರೆ ಮತ್ತು ನಗರದ ವಿವಿಧ ವಾರ್ಡ್‌ಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಿಕ್ಕನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶೌಚಾಲಯ ಸ್ವಚ್ಛವಿಲ್ಲದೆ ದುರ್ವಾಸನೆ ಬರುತ್ತಿದೆ. ನಿಮ್ಮ ಮನೆಯಲ್ಲಿ ಹೀಗೆ ಇಟ್ಟುಕೊಳ್ಳುತ್ತೀರಾ? ಎಂದು ನಿಲಯ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡರು. ಸ್ವಚ್ಛತೆಯಿಲ್ಲದೆ ಡೆಂಗಿ ಪ್ರಕರಣ ಹೆಚ್ಚುತ್ತಿವೆ. ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದರು.

ಕಂದಾಯ ಪ್ರಗತಿ ಸಾಧಿಸಲು ಸೂಚನೆ: ಯಲಿಯೂರು ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಬಾಕಿ ಇರುವ ಪಹಣಿಗೆ ಆಧಾರ್ ಜೋಡಣೆ, ಲ್ಯಾಂಡ್ ಬೀಟ್, ಮರಣ ಪ್ರಮಾಣ ಪತ್ರ, ಪಿಂಚಣಿ ವಿತರಣೆ, ಪೌತಿ ಖಾತೆ ಅರ್ಜಿಗಳನ್ನು ವಿಲೇವಾರಿ ಮಾಡಿ ಕಂದಾಯ ಪ್ರಗತಿ ಸಾಧಿಸಬೇಕು ಎಂದರು.

ADVERTISEMENT

ಮಧುಗಿರಿ ಉಪವಿಭಾಗಕ್ಕೆ ಸಂಬಂಧಿಸಿದಂತೆ ಜುಲೈ ತಿಂಗಳೊಳಗೆ 1500 ಪೌತಿ ಖಾತೆ ಅರ್ಜಿ ವಿಲೇವಾರಿ ಮಾಡಲು ಗುರಿ ನೀಡಲಾಗಿದೆ. ವಾರಸುದಾರರು ಪೌತಿ ಖಾತೆಗೆ ಅಗತ್ಯವಿರುವ ವಂಶವೃಕ್ಷ, ಮರಣ ಪ್ರಮಾಣ ಪತ್ರ, ಪಹಣಿ ಪತ್ರ  ಒದಗಿಸಿದ್ದಲ್ಲಿ 15 ದಿನದೊಳಗೆ ಪೌತಿ ಖಾತೆ ಬದಲಾವಣೆ ಮಾಡಬೇಕು ಎಂದರು.

ಬಯೋಮೆಟ್ರಿಕ್ ಕಡ್ಡಾಯ: ಪಶು ಆಸ್ಪತ್ರೆಗೆ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದರು. ಎಲ್ಲ ತಾಲ್ಲೂಕು ಮಟ್ಟದ 31 ಇಲಾಖೆ ಕಚೇರಿಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ಅಳವಡಿಸುವಂತೆ ಸೂಚಿಸಿದರು.

ತಾಯಿ ಮತ್ತು ಮಗು ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡೆಂಗಿ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಡೆಂಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ಮೀಸಲಿಡುವಂತೆ ಸೂಚಿಸಿದರು.

ಶಿರಾದಲ್ಲಿ ಸೋಮವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮಳೆಯಲ್ಲಿಯೇ ವಿವಿಧ ವಾರ್ಡುಗಳಿಗೆ ಭೇಟಿ ನೀಡಿ ನಾಗರೀಕರಿಂದ ಸಮಸ್ಯೆಗಳನ್ನು ಅಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.