ADVERTISEMENT

ತುಮಕೂರು: ನಗರದ ಉದ್ಯಾನಗಳಿಗೆ ಹೊಸರೂಪ, ಜನ ಸ್ನೇಹಿ ವಾತಾವರಣಕ್ಕೆ ಆದ್ಯತೆ

ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನಿಂದ ಅಭಿವೃದ್ಧಿ

ಪೀರ್‌ ಪಾಶ, ಬೆಂಗಳೂರು
Published 5 ಅಕ್ಟೋಬರ್ 2019, 9:48 IST
Last Updated 5 ಅಕ್ಟೋಬರ್ 2019, 9:48 IST
ಕಲಾವಿದನ ಕಲ್ಪನೆಯಲ್ಲಿ ಆದರ್ಶನಗರದ ಉದ್ಯಾನ
ಕಲಾವಿದನ ಕಲ್ಪನೆಯಲ್ಲಿ ಆದರ್ಶನಗರದ ಉದ್ಯಾನ   

ತುಮಕೂರು: ನಗರದಲ್ಲಿನ ಉದ್ಯಾನಗಳಿಗೆ ಹೊಸ ರೂಪ ನೀಡುವ ಕಾರ್ಯವನ್ನು ತುಮಕೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌(ಟಿ.ಎಸ್‌.ಸಿ.ಎಲ್‌.) ಕೈಗೆತ್ತಿಕೊಂಡಿದೆ.

ಉದ್ಯಾನಗಳಲ್ಲಿ ಎಲ್ಲ ವಯೋಮಾನದವರಿಗೆ ಹೊಂದುವ ವಾತಾವರಣ, ಪರಿಸರ ಸ್ನೇಹಿಯಾದ ಸೌಲಭ್ಯಗಳನ್ನು ಒದಗಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ.

ಆದರ್ಶನಗರ, ಸೋಮೇಶ್ವರಪುರ ಮತ್ತು ಕುವೆಂಪುನಗರ ಉದ್ಯಾನಗಳ ಅಭಿವೃದ್ಧಿ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಸಪ್ತಗಿರಿ ಬಡಾವಣೆ, ಅಮರಜ್ಯೋತಿನಗರ, ಗೋಕುಲ ಎಕ್ಸ್‌ಟೆನ್ಷನ್‌, ಜಯನಗರ ಮತ್ತು ಮಹಾಲಕ್ಷ್ಮಿನಗರದ ಉದ್ಯಾನಗಳ ನವೀಕರಣದ ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಕಾರ್ಯಾದೇಶ ನೀಡುವುದು ಬಾಕಿಯಿದೆ.

ADVERTISEMENT

ಇದರೊಂದಿಗೆ ಇನ್ನೂ 20 ಉದ್ಯಾನಗಳನ್ನು ಅಭಿವೃದ್ಧಿಪಡಿಸಲು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಸ್ಥಳ ಸಮೀಕ್ಷೆ ನಡೆಸುತ್ತಿದೆ.

ಸದ್ಯ ಆರಂಭಗೊಂಡಿರುವ ಉದ್ಯಾನ ಅಭಿವೃದ್ಧಿ ಕಾಮಗಾರಿಗಳನ್ನು ನಾಲ್ಕು ತಿಂಗಳ ಒಳಗೆ ಮುಗಿಸಲು ಗುತ್ತಿಗೆದಾರರಿಗೆ ಗಡುವು ನಿಗದಿಪಡಿಸಲಾಗಿದೆ. ಉದ್ಯಾನಗಳ ವಿನ್ಯಾಸವನ್ನು ಜಿ.ಟಿ.ಇಂಡಿಯಾ ಕಂಪನಿ ಸಿದ್ಧಪಡಿಸಿದೆ. ಕಾಮಗಾರಿಗಳ ಮೇಲ್ವಿಚಾರಣೆಯನ್ನೂ ಕಂಪನಿ ಮಾಡುತ್ತಿದೆ.

ಉದ್ಯಾನದಲ್ಲಿನ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಗಿಡಗಳನ್ನು ನೆಟ್ಟು, ಹುಲ್ಲು ಹಾಸುವ ಕಾರ್ಯವನ್ನು ತೋಟಗಾರಿಕೆ ಇಲಾಖೆ ಮಾಡಲಿದೆ. ಬಳಿಕ ಉದ್ಯಾನಗಳ ನಿರ್ವಹಣೆಯನ್ನು ಮಹಾನಗರ ಪಾಲಿಕೆ ಮಾಡಲಿದೆ.

ಉದ್ಯಾನದಲ್ಲೊಂದು ‘ಸ್ಮಾರ್ಟ್‌’ ಸ್ತಂಭ: ಒಂದು ಉದ್ಯಾನದಲ್ಲಿ ಪ್ರಾಯೋಗಿಕವಾಗಿ ‘ಸ್ಮಾರ್ಟ್‌ ಸ್ತಂಭ’ ನಿಲ್ಲಿಸಲು ಟಿ.ಎಸ್‌.ಸಿ.ಎಲ್‌. ನಿರ್ಧರಿಸಿದೆ.

ಆ ಕಂಬದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ, ವಿದ್ಯುತ್‌ ದೀಪ, ತುರ್ತು ಸಂದರ್ಭಕ್ಕೆ ಸೈರನ್‌ ಮೊಳಗಿಸುವ ಒತ್ತುಗುಂಡಿ, ವೈ–ಫೈ ಸೌಲಭ್ಯದ ತಂತ್ರಾಂಶ, ತೂಕ ತಿಳಿಯುವ ಮತ್ತು ರಕ್ತದ ಒತ್ತಡ ಪರೀಕ್ಷೆ ಮಾಡುವ ‘ಬಾಡಿ ಮಾಕ್ಸ್‌ ಇಂಡೆಸ್‌’ ಇರಲಿದೆ ಎಂದು ಸ್ಮಾರ್ಟ್‌ ಸಿಟಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸ್ಥಳಾವಕಾಶ ಹೆಚ್ಚು ಇರುವ ಉದ್ಯಾನಗಳಲ್ಲಿ ಭದ್ರತಾ ಸಿಬ್ಬಂದಿ ಕೊಠಡಿ, ಶೌಚಾಲಯ, ಸೌರಶಕ್ತಿ ದೀಪಗಳನ್ನು ಅಳವಡಿಸುತ್ತೇವೆ ಎಂದು ಅವರು ಹೇಳಿದರು.

ಉದ್ಯಾನದಲ್ಲಿ ಇರಲಿರುವ ಸೌಲಭ್ಯಗಳು
* ವಾಯುವಿಹಾರ ಪಥ
* ಕಲ್ಲುಬೆಂಚುಗಳು
* ಮಕ್ಕಳ ಆಟದ ಮೈದಾನ
* ವ್ಯಾಯಾಮ ಉಪಕರಣಗಳು
* ಕುಟಿರ
* ಮಳೆನೀರು ಇಂಗುಗುಂಡಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.