
ಕುಣಿಗಲ್: ಮಗನಿಂದಲೇ ಅನ್ಯಾಯವಾಗಿದ್ದು, ಮನೆಯನ್ನು ವಶಕ್ಕೆ ಕೊಡಿಸುವಂತೆ ತಾಯಿ ಮಾಡಿದ ಮನವಿ ಮೇರೆಗೆ ಉಪವಿಭಾಗಾಧಿಕಾರಿ ಆದೇಶದಂತೆ ಕಂದಾಯ, ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತಾಯಿಯನ್ನು ಬುಧವಾರ ಮನೆಗೆ ಸೇರಿಸಲಾಯಿತು.
ತಾಲ್ಲೂಕಿನ ಬಿಳಿದೇವಾಲಯದ ತಿಮ್ಮಮ್ಮ (90) ಮಗನಿಂದಲೇ ಅನ್ಯಾಯಕ್ಕೊಳಗಾದವರು.
‘ಮಗ ಕೃಷ್ಣರಾಜು ನನ್ನ ಹೆಸರಿನಲ್ಲಿದ್ದ ಸ್ವತ್ತನ್ನು ದಾಖಲೆಗಳನ್ನು ಸೃಷ್ಟಿಸಿ ಖಾತೆ ಮಾಡಿಸಿಕೊಂಡು ಮನೆಯಿಂದ ಹೊರಗಟ್ಟಿದ್ದ’ ಎಂದು ತಿಮ್ಮಮ್ಮ ಆರೋಪಿಸಿದ್ದರು.
ತಾಯಿ ತಿಮ್ಮಮ್ಮ ಮಗಳ ಮನೆ ಸೇರಿ ನಂತರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ನ್ಯಾಯಾಲಯದಲ್ಲಿ ಮನವಿ ಮಾಡಿದ ಮೇರೆಗೆ ದಾಖಲೆ ಪರಿಶೀಲಿಸಿದ ಅಧಿಕಾರಿಗಳು ಖಾತೆ ರದ್ದು ಮಾಡಿದ್ದರು. ಮನೆ ಬಿಟ್ಟುಕೊಡಲು ಮಗ ನಿರಾಕರಿಸಿದ ಕಾರಣ ತಾಯಿ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮನೆಯನ್ನು ವಶಕ್ಕೆ ಕೊಡಿಸುವಂತೆ ಮನವಿ ಮಾಡಿದ್ದರು.
ಉಪವಿಭಾಗಾಧಿಕಾರಿ ಬಿಳಿದೇವಾಲಯದಲ್ಲಿರುವ ಸ್ವತ್ತನ್ನು ಮಗ, ಸೊಸೆ ಮತ್ತು ಮೊಮ್ಮಗಳಿಂದ ಬಿಡಿಸಿಕೊಡಲು ನೀಡಿದ ಆದೇಶದ ಮೇರೆಗೆ ಗ್ರಾಮ ಆಡಳಿತಾಧಿಕಾರಿ ಮಹೇಶ್ ಮತ್ತು ಸಿಬ್ಬಂದಿ, ಪಿಡಿಒ ದಿಲೀಪ್ ಮತ್ತು ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳಾದ ಝಿಲಾನಿ, ಗುರುಮೂರ್ತಿ, ಷಡಾಕ್ಷರಿ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಕೃಷ್ಣರಾಜು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಅಧಿಕಾರಿಗಳು ಕೃಷ್ಣರಾಜು ಅವರನ್ನು ಬಲವಂತವಾಗಿ ಹೊರಗೆಳೆದು ತಿಮ್ಮಮ್ಮ ಅವರನ್ನು ಮನೆಯೊಳಗೆ ಸೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.