ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 501 ಅಂಕ: ಬಡತನ, ಅಂಗವಿಕಲತೆ ಮೆಟ್ಟಿನಿಂತ ಕೋಟೇಶ್

​ಪ್ರಜಾವಾಣಿ ವಾರ್ತೆ
Published 2 ಮೇ 2019, 11:15 IST
Last Updated 2 ಮೇ 2019, 11:15 IST
ಶಿರಾ ತಾಲ್ಲೂಕಿನ ದ್ವಾರನಕುಂಟೆ ಗ್ರಾಮದ ಡಿ.ಕೆ.ಕೊಟೇಶ್.ಮತ್ತು ಕುಟುಂಬದವರು.
ಶಿರಾ ತಾಲ್ಲೂಕಿನ ದ್ವಾರನಕುಂಟೆ ಗ್ರಾಮದ ಡಿ.ಕೆ.ಕೊಟೇಶ್.ಮತ್ತು ಕುಟುಂಬದವರು.   

ಶಿರಾ: ತಾಲ್ಲೂಕಿನ ದ್ವಾರನಕುಂಟೆ ಗ್ರಾಮದ ಡಿ.ಕೆ.ಕೋಟೇಶ್ ಹುಟ್ಟಿನಿಂದ ಅಂಧನಾಗಿದ್ದರೂ ಅಂಗವಿಕಲತೆಯನ್ನು ಮೆಟ್ಟಿ ನಿಂತು ಎಸ್‌ಎಸ್‌ಎಲ್‌ಸಿಪರೀಕ್ಷೆಯಲ್ಲಿ 501 (ಶೇ 80.16) ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾನೆ.

ಪ್ರಾಥಮಿಕ ಶಿಕ್ಷಣ ಮುಗಿಸಿ ಡಿ.ಕೆ.ಕೋಟೇಶ್‌ಗೆದೃಷ್ಟಿ ಇಲ್ಲದ ಕಾರಣ 8ನೇ ತರಗತಿಗೆ ದಾಖಲು ಮಾಡಿಕೊಳ್ಳಲು ಶಾಲೆಗಳು ನಿರಾಕರಿಸಿದವು. ಆದ್ದರಿಂದ 2 ವರ್ಷ ಶಿಕ್ಷಣ ಮೊಟಕುಗೊಳಿಸಿದ. ಶಿಕ್ಷಣ ಪಡೆಯಬೇಕು ಎಂಬ ಮಹಾದಾಸೆಯಿಂದ ಕಂಡ ಕಂಡವರ ಬಳಿ ಸಹಾಯ ಕೇಳಿ ನಂತರ 2 ವರ್ಷದ ನಂತರ ದ್ವಾರನಕುಂಟೆ ಗ್ರಾಮದ ಕಾಳಿದಾಸ ಪ್ರೌಢಶಾಲೆಗೆ ಸೇರಿದನು.

2018- 19ನೇ ಸಾಲಿನ ಎಸ್‌ಎಸ್‌ಎಲ್‌ಸಿಪರೀಕ್ಷೆಯ ಕನ್ನಡ ವಿಷಯದಲ್ಲಿ 119, ಇಂಗ್ಲಿಷ್ 73, ಸಮಾಜ ಶಾಸ್ತ್ರ 85, ರಾಜ್ಯ ಶಾಸ್ತ್ರ 60, ಹಿಂದಿ 86, ಸಮಾಜ ವಿಜ್ಞಾನ 78 ಸೇರಿದಂತೆ ಒಟ್ಟು 501 ಅಂಕ ಪಡೆದಿದ್ದಾನೆ.

ADVERTISEMENT

ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಡಿ.ಕೆ.ಕೋಟೇಶ್‌ ಮತ್ತು ತಂಗಿ ಪ್ರೇಮ ಹುಟ್ಟು ಕುರುಡರಾಗಿದ್ದಾರೆ. ಬಡಕುಟುಂಬದಲ್ಲಿ ಜೀವನ ಸಾಗಿಸುತ್ತಿರುವ ಇವರಿಗೆ ಸರ್ಕಾರ ನೀಡುತ್ತಿರುವ ಅಂಗವಿಕಲರ ಮಾಸಾಶನ ಇಬ್ಬರಿಂದ ಬರುವ ₹ 2400 ಇವರ ಜೀವನಕ್ಕೆ ಆಧಾರವಾಗಿದೆ.

ಡಿ.ಕೆ.ಕೋಟೇಶ್‌ಗೆ ಓದಿ ತನ್ನ ತಾಯಿ ಮತ್ತು ತಂಗಿ ಪ್ರೇಮಳ ಬದುಕನ್ನು ಹಸನು ಮಾಡುವ ಆಸೆ.

‘ಪಿಯುಸಿ ಶಿಕ್ಷಣ ಪಡೆಯಲು ಆರ್ಥಿಕ ಕೊರತೆ ಎದುರಾಗಿದೆ. ಓದಬೇಕು ಎನ್ನುವ ಅಸೆ ಇದ್ದರೂ ಆರ್ಥಿಕ ಸಂಕಷ್ಟದಿಂದ ಸಾಧ್ಯವಾಗಿಲ್ಲ. ದಾನಿಗಳು ಸಹಾಯ ಹಸ್ತ ನೀಡಿದರೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವುದು’ ಎನ್ನುತ್ತಾರೆ ಕೊಟೇಶ್.

ನೆರವು ನೀಡುವರು ಡಿ.ಕೆ.ಕೊಟೇಶ್, ಕೆನರಾ ಬ್ಯಾಂಕ್, ಖಾತೆ ಸಂಖ್ಯೆ 0443101153628, ಐಎಫ್‌ಎಸ್‌ಸಿ ಕೊಡ್ CNRB0000443, ಪಟ್ಟನಾಯಕನಹಳ್ಳಿ ಶಾಖೆ, ಶಿರಾ ತಾಲ್ಲೂಕು ಈ ವಿಳಾಸಕ್ಕೆ ಹಣ ಪಾವತಿಸಬಹುದು.

**
ಅಂದನಾದರೂ ಓದುವ ಆಸೆ
‘ನಾನು ಅವಿದ್ಯಾವಂತೆ. ನನ್ನ ಮಗ ಅಂದನಾದರೂ ಓದುವ ಆಸೆ ಇದೆ. ಸಾಧಿಸಬೇಕೆಂಬ ಹಂಬಲ ಜಾಸ್ತಿ. ಪಿಯುಸಿ ಓದಲು ಜಿಲ್ಲಾ ಕೇಂದ್ರಕ್ಕೆ ಹೋಗಬೇಕು. ಜೀವನ ಸಾಗಿಸುವುದೆ ಕಷ್ಟವಾಗಿರುವಾಗ ಮಗನಿಗೆ ಓದಿಸಲು ಹೇಗೆ ಸಾಧ್ಯ ಬಡವರ ಹಣೆಬರಹವೇ ಇಷ್ಟು’.
–ರಂಗಮ್ಮ, ಕೋಟೇಶ್ ತಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.