ADVERTISEMENT

ತಿಪಟೂರು: ಇಂದಿನಿಂದ ಕೊಬ್ಬರಿ ಖರೀದಿ ಆರಂಭ

ನಫೆಡ್‌ ಮೂಲಕ ಖರೀದಿ; ನೋಂದಣಿಗೆ ಆಸಕ್ತಿ ತೋರದ ರೈತರು

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 8:35 IST
Last Updated 22 ಜುಲೈ 2020, 8:35 IST
ತಿಪಟೂರು ಕೊಬ್ಬರಿ ಮಾರುಕಟ್ಟೆಯ ಹೊರಾಂಗಣ
ತಿಪಟೂರು ಕೊಬ್ಬರಿ ಮಾರುಕಟ್ಟೆಯ ಹೊರಾಂಗಣ   

ತಿಪಟೂರು: ಕೊಬ್ಬರಿ ಬೆಲೆಯಲ್ಲಿ ತೀವ್ರ ಕುಸಿತ ಕಂಡ 5 ತಿಂಗಳ ನಂತರ ಕೇಂದ್ರ ಸರ್ಕಾರ ನಫೆಡ್ ಮೂಲಕ ಬೆಂಬಲ ಬೆಲೆಯಲ್ಲಿಖರೀದಿಸಲು ಮುಂದಾಗಿದೆ. ನೋಂದಣಿ ಪ್ರಾರಂಭವಾಗಿ ತಿಂಗಳು ಕಳೆದಿದ್ದು, ಜು. 22ರಿಂದ ಖರೀದಿ ಆರಂಭವಾಗಲಿದೆ. ಈವರೆಗೂ ಕೇವಲ 152 ರೈತರು ಮಾತ್ರ ನೋಂದಣಿ ಮಾಡಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿಯನ್ನು ನೇರವಾಗಿ ನಫೆಡ್ ಮೂಲಕ ಖರೀದಿಸುವ ಸಲುವಾಗಿ ನೋಂದಣಿ ಮಾಡಿಸಿಕೊಳ್ಳಲು ಜೂನ್ 18ರಿಂದ ಜುಲೈ 25ರ ವರೆಗೆ ಸಮಯ ನಿಗದಿ ಮಾಡಲಾಗಿದೆ. ಆದರೆ ಕಡಿಮೆ ಬೆಲೆ ನಿಗದಿಪಡಿಸಲಾಗಿದೆ ಎಂದು ಅಸಮಾಧಾನಗೊಂಡಿರುವ ರೈತರು ನೋಂದಣಿಗೆ ಆಸಕ್ತಿ ತೋರಿಸುತ್ತಿಲ್ಲ.

ಕೇಂದ್ರ ಸರ್ಕಾರ ಕ್ವಿಂಟಲ್‌ಗೆ ₹10,300 ಬೆಲೆ ನಿಗದಿಪಡಿಸಿದ್ದು, ರಾಜ್ಯ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಧನ ದೊರೆತಿಲ್ಲ. ಕ್ವಿಂಟಲ್ ಕೊಬ್ಬರಿಗೆ ₹20 ಸಾವಿರ ಉತ್ಪಾದನಾ ವೆಚ್ಚ ತಗುಲುತ್ತದೆ. ನಷ್ಟಮಾಡಿಕೊಂಡು ಕೊಬ್ಬರಿ ಮಾರಾಟ ಮಾಡಬೇಕಾಗಿದೆ ಎಂದು ರೈತರು ಹೇಳುತ್ತಾರೆ.

ADVERTISEMENT

‘ನಫೆಡ್ ಕೇಂದ್ರದಲ್ಲಿ ಗುಣಮಟ್ಟದ ಕೊಬ್ಬರಿಯನ್ನು ಮಾತ್ರವೇ ಖರೀದಿಸ ಲಿದ್ದು, ಕಡಿಮೆ ಗಾತ್ರದ ಕೊಬ್ಬರಿ ಕೊಳ್ಳುವುದಿಲ್ಲ. ಆದ್ದರಿಂದ ಬೆಲೆಯಲ್ಲಿ ₹1,000 ಕಡಿಮೆಯಾದರೂ ನೇರವಾಗಿ ಖರೀದಿದಾರರಿಗೆ ನೀಡುತ್ತಿದ್ದಾರೆ. ಇದರಿಂದ ಅಗತ್ಯವಿದ್ದಾಗ ವರ್ತಕರಿಂದ ಕೈಸಾಲ ಪಡೆದುಕೊಳ್ಳಲೂ ಅವಕಾಶಗ ಳಿರುತ್ತವೆ’ ಎಂಬುದು ರೈತರ ಅಭಿಪ್ರಾಯ.

2016–17ನೇ ಸಾಲಿನಿಂದ ಈವರೆಗೂ ಕೊಬ್ಬರಿ ಬೆಲೆಯಲ್ಲಿ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗದೆ ನಫೆಡ್ ಕೇಂದ್ರ ಪ್ರಾರಂಭಿಸಿರಲಿಲ್ಲ. ಈಗ ಬೆಲೆ ಕುಸಿದಿದ್ದು, ಖರೀದಿಗೆ ಸರ್ಕಾರ ಮುಂದಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಕ್ವಿಂಟಲ್‌ಗೆ ₹15 ಸಾವಿರದಿಂದ ₹17 ಸಾವಿರ ಇತ್ತು. ಆದರೆ, ಕೋವಿಡ್-19 ಪರಿಣಾಮ ಬೆಲೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.