ಪಾವಗಡ: ವಿಶ್ವಮಟ್ಟದಲ್ಲಿ ಸೋಲಾರ್ ಪಾರ್ಕ್‌ನಿಂದ ಹೆಸರು ಪಡೆದಿರುವ ತಾಲ್ಲೂಕಿನ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಬಜೆಟ್‌ನಲ್ಲಿ ಆದ್ಯತೆ ಸಿಗಲಿದೆಯೇ ಎಂದು ಆಸೆಯಿಂದ ಜನರು ಕಾದು ಕುಳಿತಿದ್ದಾರೆ. ಆಯವ್ಯಯದಲ್ಲಿ ಕ್ಷೇತ್ರಕ್ಕೆ ಎಷ್ಟು ಮಹತ್ವ ದೊರೆಯಬಹುದು ಎನ್ನುವ ಚರ್ಚೆ ನಡೆಯುತ್ತಿದೆ.
ತಾಲ್ಲೂಕಿನಲ್ಲಿ ಪ್ರವಾಸೋದ್ಯಮ, ನೀರಾವರಿ, ತೋಟಗಾರಿಕೆ, ರೇಷ್ಮೆ, ಕೈಗಾರಿಕೆಗಳ ಪ್ರಗತಿಗೆ ಹೆಚ್ಚಿನ ಅವಕಾಶಗಳಿವೆ. ರೈಲ್ವೆ, ಬೈಪಾಸ್ ರಸ್ತೆ, ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಪಡೆದು ತಾಲ್ಲೂಕಿನ ಅಭಿವೃದ್ಧಿಗೆ ಶಾಸಕರು ಶ್ರಮಿಸಬೇಕಿದೆ.
ತಾಲ್ಲೂಕಿನ ಕಡಮಲಕುಂಟೆ ಬಳಿಯ ಕೈಗಾರಿಕಾ ಪ್ರದೇಶವನ್ನು ವಿಸ್ತರಿಸಿ ಕೈಗಾರಿಕೆಗಳಿಗೆ, ಗಾರ್ಮೆಂಟ್ಸ್ ಆರಂಭಿಸಲು ಸೂಕ್ತ ವಾತಾವರಣ ನಿರ್ಮಿಸಿ, ಯುಜನತೆಗೆ ಉದ್ಯೋಗ ಸೃಷ್ಟಿಸಬೇಕಿದೆ.
ಸೋಲಾರ್ ಪಾರ್ಕ್‌ಗೆ ಜಮೀನು ನೀಡಿರುವ ರೈತರ ಅಭಿವೃದ್ಧಿಗೆ, ಆ ಭಾಗದ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಶಿಕ್ಷಣ ಸಂಸ್ಥೆ, ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ರೈತರು, ಯುವ ಜನತೆ ವಲಸೆ ಹೋಗುವುದನ್ನು ತಪ್ಪಿಸಬಹುದಾಗಿದೆ.
ನಾಗಲಮಡಿಕೆ ಬಳಿಯ ಉತ್ತರ ಪಿನಾಕಿನಿ, ನಿಡಗಲ್ ದುರ್ಗ, ಕಾಮನದುರ್ಗ, ಪಾವಗಡ ಬೆಟ್ಟ ಇತ್ಯಾದಿ ಐತಿಹಾಸಿಕ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ತಾಣಗಳನ್ನಾಗಿ ಘೋಷಣೆ ಮಾಡಿ ಆದಾಯ ಹೆಚ್ಚಿಸಬಹುದು ಎನ್ನುವುದು ಜನತೆಯ ಒತ್ತಾಸೆ.
ತಾಲ್ಲೂಕಿನಲ್ಲಿ ಡಿಪ್ಲೊಮಾ, ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜು ಪ್ರಾರಂಭಿಸುವ ಜೊತೆಗೆ, ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬುವ, ಶಿಥಿಲಾವಸ್ಥೆಯಲ್ಲಿರುವ ಕನ್ನಡ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕಿದೆ.
ಆಮೆಗತಿಯಲ್ಲಿ ಸಾಗುತ್ತಿರುವ ರಾಯದುರ್ಗ- ತುಮಕೂರು ರೈಲು ಮಾರ್ಗದ ಕಾಮಗಾರಿ ವಿಳಂಬವಾಗಿದ್ದು ಆಯವ್ಯಯದಲ್ಲಿ ಅನುದಾನವನ್ನು ನೀಡಿ ಕಾಮಗಾರಿಯ ವೇಗ ಹೆಚ್ಚಿಸಿ ತಕ್ಷಣ ಕಾಮಗಾರಿ ಪೂರ್ಣಗೊಳಿಸಬೇಕು ಎನ್ನುವುದು ಜನತೆಯ ಒತ್ತಾಯವಾಗಿದೆ.
ತುಂಗಭಧ್ರಾ ಕುಡಿಯುವ ನೀರಿನ ಯೋಜನೆ ಮೂಲಕ ಈಗಾಗಲೆ ಪ್ರಾಯೋಗಿಕವಾಗಿ ತಾಲ್ಲೂಕಿಗೆ ನೀರು ಹರಿಸಲಾಗಿದೆ. ಇದರೊಟ್ಟಿಗೆ ಮಂದಗತಿಯಲ್ಲಿ ಸಾಗುತ್ತಿರುವ ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಕಾಮಗಾರಿಯ ವೇಗ ಹೆಚ್ಚಿಸಬೇಕಿದೆ.
ವೈ.ಎನ್ ಹೊಸಕೋಟೆಯಲ್ಲಿ ರೇಷ್ಮೆ ಸೀರೆಗಳನ್ನು ನೇಯುವ ಮಗ್ಗಗಳನ್ನು ಮೇಲೆ ಸಾವಿರಾರು ಮಂದಿ ಅವಲಂಬಿಸಿದ್ದಾರೆ. ಸ್ಥಳೀಯ ಮಾರುಕಟ್ಟೆ ಇಲ್ಲದೆ ಆಂಧ್ರದ ಧರ್ಮಾವರಂ, ಅನಂತಪುರಂ ಸೇರಿದಂತೆ ವಿವಿಧೆಡೆಗೆ ರೇಷ್ಮೆ ಸೀರೆಗಳನ್ನು ಮಾರಾಟ ಮಾಡಲಾಗುತ್ತಿದೆ. ವೈ.ಎನ್ ಹೊಸಕೋಟೆ ಬ್ರಾಂಡ್‌ನಲ್ಲಿ ರೇಷ್ಮೆ ಸೀರೆಗಳ ಮಾರಾಟಕ್ಕೆ ಯೋಜನೆ ರೂಪಿಸಬೇಕಿದೆ.
ಹಲ ವರ್ಷಗಳಿಂದ ರೈಲ್ವೆ ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿ ರೈಲ್ವೆ ಕಾಮಗಾರಿ ವೇಗ ಹೆಚ್ಚಿಸಬೇಕು.ಪಿ.ಎ ನರಸಿಂಹಪ್ಪ ಪಳವಳ್ಳಿ
ತಾಲ್ಲೂಕಿನಿಂದ ಲಕ್ಷಾಂತರ ಮಂದಿ ಕೆಲಸಕ್ಕಾಗಿ ಬೆಂಗಳೂರು ತುಮಕೂರು ಸೇರಿದಂತೆ ವಿವಿಧೆಡೆಗೆ ಹೋಗುತ್ತಿದ್ದಾರೆ. ಸ್ಥಳೀಯವಾಗಿ ಕೈಗಾರಿಕೆಗಳು ಗಾರ್ಮೆಂಟ್ಸ್ ಆರಂಭಿಸಿ ಉದ್ಯೋಗ ಸೃಷ್ಟಿಸಬೇಕಿದೆ.ಎ.ಎಸ್ ರಘುನಂದನ್ ವಕೀಲ
ತುಂಗಭದ್ರಾ ಕುಡಿಯುವ ನೀರನ್ನು ಪ್ರಾಯೋಗಿಕವಾಗಿ ಹರಿಸಲಾಗಿದೆ. ಆದರೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿವೆ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದಲ್ಲಿ ರೈತರ ಬದುಕು ಹಸನಾಗುತ್ತದೆ.
ಶಿವರಾಮು, ಜೋಡಿ ಅಚ್ಚಮ್ಮನಹಳ್ಳಿ
ಪಟ್ಟಣದ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಶೀಘ್ರ ಬೈಪಾಸ್ ನಿರ್ಮಾಣವಾದಲ್ಲಿ ವಾಹನ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ಜನರ ಜೀವಗಳು ಉಳಿಯುತ್ತವೆ. ಸಂಚಾರ ದಟ್ಟಣೆ ಕಿರಿಕಿರಿ ತಪ್ಪುತ್ತದೆ.
ಪ್ರಕಾಶ್, ಪಾವಗಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.