ತುಮಕೂರು: ‘ನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನಾಯಿಗಳು ಹತ್ತಿರ ಬರದಿರಲಿ ಎಂಬ ಕಾರಣಕ್ಕೆ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಹೋಗಬೇಕಿದೆ.....’
‘ಇನ್ನೂ ಸಂಜೆ 5 ಗಂಟೆ ಸಮಯದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಲಗಿದ್ದ ನಾಯಿ ಒಮ್ಮೆಲೆ ಮೈಮೇಲೆ ಬಿತ್ತು. ಬಿರುಸಾಗಿ ಕಚ್ಚಲು ಬಂತು. ಬೆದರಿಸಲು ಕೈಯಲ್ಲಿ ಏನೂ ಇರಲಿಲ್ಲ. ತಕ್ಷಣಕ್ಕೆ ಪಾರಾಗಲು ಸ್ವಲ್ಪ ದೂರ ಓಡಿದೆ. ಆದರೂ ಬಿಡಲಿಲ್ಲ. ಅಲ್ಲೇ ಬಿದ್ದಿದ್ದ ಕಲ್ಲು ಎತ್ತಿಕೊಂಡು ತೂರಿದೆ. ಇಲ್ಲವಾದರೆ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ.....’
‘ಮಗು ಎತ್ತಿಕೊಂಡು ಹೋಗುತ್ತಿದ್ದೆ. ಪಾಪು ಕೈಯಲ್ಲಿದ್ದ ಬಿಸ್ಕೀಟ್ ಕಿತ್ತುಕೊಳ್ಳಲು ಬಂದ ಒಂದು ಹಿಂಡು ನಾಯಿ ಮೈ ಮೇಲೆ ಎರಗಿದವು. ಕಚ್ಚಿ, ಪರಚಿ ಗಾಯ ಮಾಡಿದವು.....’
–ಹೀಗೆ ನಗರದಲ್ಲಿ ಬೀದಿ ನಾಯಿಗಳ ಉಪಟಳದಿಂದ ಬೇಸತ್ತವರ ಒಂದೊಂದು ಕಥೆ ಬಿಚ್ಚಿಕೊಳ್ಳುತ್ತದೆ. ನಗರ, ಪಟ್ಟಣವಾಸಿಗಳು ಮನೆಯಿಂದ ಹೊರಗೆ ಬಂದರೆ ನಾಯಿಗಳು ಸಿಂಹ ಸ್ವಪ್ನವಾಗಿ ಕಾಡುತ್ತಿವೆ. ಹಿಂದೆಲ್ಲ ಕಚ್ಚುತ್ತಿದ್ದು ಕಡಿಮೆ. ಆದರೆ ಈಗ ಕಚ್ಚಿಯೇ ಮಾತನಾಡುವುದು ಎಂಬಂತಾಗಿದೆ.
ನಗರದಲ್ಲಿ ನಿಲ್ಲುತ್ತಿಲ್ಲ:
ಜೂನ್ 18ರಂದು ಗೋಕುಲ ಬಡಾವಣೆಯಲ್ಲಿ 9 ವರ್ಷದ ಮಗು ಸೇರಿ ಐದು ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿತು. ಎಲ್ಲರು ಗಾಯಗಳಿಂದ ನರಳಿದರು. ಗಾಯ ವಾಸಿಮಾಡಿಕೊಳ್ಳಲು ಆಸ್ಪತ್ರೆಗೆ ಅಲೆದರು. ಮಹಾನಗರ ಪಾಲಿಕೆ ಆಯುಕ್ತರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡವರಿಗೆ ತಲಾ ₹5 ಸಾವಿರ ಪರಿಹಾರದ ಚೆಕ್ ವಿತರಿಸಿದರು.
ಇದರ ನಂತರ ಜೂನ್ 26ರಂದು ರಾಜೀವ್‌ಗಾಂಧಿ ನಗರದ ಮನೆಯಂಗಳದಲ್ಲಿ ಆಟವಾಡಿಕೊಂಡಿದ್ದ ಬಾಲಕಿ ಮೇಲೆ ಎರಗಿದ ನಾಯಿಗಳ ಹಿಂಡು ಮುಖ, ಮೂತಿಗೆ ಕಚ್ಚಿ ಗಾಯಗೊಳಿಸಿದವು. ಮುಖದ ತುಂಬ ರಕ್ತದ ಕಲೆಗಳೊಂದಿಗೆ ಬಾಲಕಿ ಜಿಲ್ಲಾ ಆಸ್ಪತ್ರೆಗೆ ಸೇರಿದಳು. ಈ ಘಟನೆಯ ನಂತರವೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ.
ಜುಲೈ 3ರಂದು ಜಿಲ್ಲಾ ಕ್ರೀಡಾಂಗಣದ ರಸ್ತೆಯಲ್ಲಿ ಬೈಕ್ ಅಟ್ಟಿಸಿಕೊಂಡು ಬಂದ ನಾಯಿಗಳು ಸವಾರನನ್ನು ರಸ್ತೆಗೆ ಬೀಳಿಸಿದವು. ಕೈ–ಕಾಲಿಗೆ ಗಾಯ ಮಾಡಿಕೊಂಡ ಸವಾರ ಕುಂಟುತ್ತಾ ಆಸ್ಪತ್ರೆ ಕಡೆ ನಡೆದರು. ಇವು ಇತ್ತೀಚಿನ ಕೆಲವು ಉದಾಹರಣೆಗಳು ಮಾತ್ರ. ನಗರದಲ್ಲಿ ದಿನ ನಿತ್ಯ ಇಂತಹ ಹತ್ತಾರು ಘಟನೆಗಳು ನಡೆಯುತ್ತವೆ. ಹಲವು ಬೆಳಕಿಗೆ ಬಂದರೆ, ಇನ್ನೂ ಕೆಲವು ಗೊತ್ತಾಗುವುದೇ ಇಲ್ಲ.
ಸಾವು:
2021ರಲ್ಲಿ ಗುಬ್ಬಿಯಲ್ಲಿ ಒಬ್ಬರು, 2022ರಲ್ಲಿ ತಿಪಟೂರು, ಶಿರಾದಲ್ಲಿ ತಲಾ ಒಬ್ಬರು, 2024ರಲ್ಲಿ ಗುಬ್ಬಿಯಲ್ಲಿ ಒಬ್ಬರು ಸೇರಿ ನಾಲ್ಕು ವರ್ಷದಲ್ಲಿ ನಾಲ್ವರು ನಾಯಿ ಕಡಿತದಿಂದ ಜೀವ ಬಿಟ್ಟಿದ್ದಾರೆ. ‘ಜಿಲ್ಲಾ ಆಡಳಿತ, ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯದಿಂದ ನಾಯಿ ಕಡಿತ ಪ್ರಕರಣಗಳು ಏರಿಕೆಯಾಗುತ್ತಿವೆ’ ಎಂಬುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
‘ಮಹಾನಗರ ಪಾಲಿಕೆಯಿಂದ ಸ್ಪಂದನೆ ಕಾಣುತ್ತಿಲ್ಲ. ವಿಷಯ ಗಂಭೀರವಾದಾಗ ಮಾತ್ರ ಜನರ ಸಮಸ್ಯೆ ಆಲಿಸುತ್ತೇವೆ ಎಂಬುವುದನ್ನು ತೋರಿಸಿಕೊಳ್ಳುತ್ತಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ. ಕಾಲ ಕಾಲಕ್ಕೆ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುತ್ತಿಲ್ಲ. ಇದರಿಂದಲೇ ನಾಯಿಗಳ ಸಂಖ್ಯೆ ಹೆಚ್ಚಳವಾಗಿ ಹೆಚ್ಚಿನ ಸಮಸ್ಯೆಯಾಗುತ್ತಿದೆ’ ಎಂದು ನಗರದ ನಿವಾಸಿ ದಯಾನಂದ್ ದೂರಿದರು.
ನಿಯಂತ್ರಣ: ‘2019ರಿಂದ ಈವರೆಗೆ ನಗರ ಪ್ರದೇಶದ 4,700 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈಗ ಮತ್ತೆ ಹೊಸದಾಗಿ 3 ಸಾವಿರ ನಾಯಿಗಳ ಶಸ್ತ್ರಚಿಕಿತ್ಸೆಗೆ ಟೆಂಡರ್ ಕರೆಯಲಾಗಿದೆ’ ಎಂದು ಪಾಲಿಕೆ ಆರೋಗ್ಯಾಧಿಕಾರಿ ಹೇಳುತ್ತಿದ್ದಾರೆ. ಆದರೆ, ನಾಯಿಗಳ ಸಂತತಿಗೆ ಕಡಿವಾಣ ಬಿದ್ದಿಲ್ಲ ಎಂಬುವುದು ನಗರದಲ್ಲಿ ಒಂದು ಸುತ್ತು ಹಾಕಿದರೆ ಯಾರಿಗಾದರೂ ಮನವರಿಕೆಯಾಗುತ್ತದೆ.
‘ಹೊರಗಡೆಯಿಂದ ನಾಯಿಗಳನ್ನು ತಂದು ಇಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಇದರಿಂದಲೇ ಸಮಸ್ಯೆಯಾಗುತ್ತಿದೆ’ ಎಂದು ಪಾಲಿಕೆ ಅಧಿಕಾರಿಗಳು ಸಮಜಾಯಿಸಿ ನೀಡುತ್ತಾರೆ. ನಗರದಲ್ಲಿ ಎಷ್ಟು ನಾಯಿಗಳಿವೆ ಎಂಬುದರ ‘ಲೆಕ್ಕ’ ಮಾತ್ರ ಕೇಳಬೇಡಿ ಎನ್ನುತ್ತಾರೆ. ಪಾಲಿಕೆಯಲ್ಲಿ ಇದಕ್ಕೆ ಸಂಬಂಧಿಸಿದ ಅಂಕಿ–ಅಂಶವೇ ಇಲ್ಲ. ಇದುವರೆಗೆ ಯಾವುದೇ ಸರ್ವೆ ಮಾಡಿಲ್ಲ.
ನಾಯಿ ಕಚ್ಚಿದ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2023ರಲ್ಲಿ ಜಿಲ್ಲೆಯಾದ್ಯಂತ 3,465 ಪ್ರಕರಣಗಳು ದಾಖಲಾಗಿದ್ದವು. ಈ ವರ್ಷದ ಜೂನ್ ವರೆಗೆ 6 ತಿಂಗಳಲ್ಲೇ 3,940 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. 2020ರ ಜನವರಿಯಿಂದ 2024ರ ಜೂನ್ ವರೆಗೆ ಒಟ್ಟು 14,536 ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿವೆ.
‘ನಾಯಿಗಳ ಸಂಖ್ಯೆ ಇನ್ನಿಲ್ಲದಂತೆ ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣ. ನಿಯಂತ್ರಣಕ್ಕೆ ಕಡಿವಾಣ ಹಾಕುವಂತೆ ಮಹಾನಗರ ಪಾಲಿಕೆ, ನಗರಸಭೆಗೆ ಮನವಿ ಮಾಡಲಾಗುತ್ತಿದೆ. ಅವರಿಂದ ಅಗತ್ಯ ಸ್ಪಂದನೆ ಸಿಗುತ್ತಿಲ್ಲ’ ಎಂಬುವುದು ಆರೋಗ್ಯ ಇಲಾಖೆಯ ಅಧಿಕಾರಿಗಳ ವಿವರ.
ನಾಯಿ ಆಕ್ರಮಣಕ್ಕೆ ಏನು ಕಾರಣ?
‘ಈಚೆಗೆ ಬೀದಿಗೆ ಒಂದರಂತೆ ಮಾಂಸದ ಅಂಗಡಿಗಳು ತಲೆ ಎತ್ತಿವೆ. ಇಲ್ಲಿ ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ. ಖಾಲಿ ಜಾಗ ರಸ್ತೆಯ ಪಕ್ಕದಲ್ಲಿ ಮಾಂಸದ ತ್ಯಾಜ್ಯ ಬಿಸಾಡುತ್ತಿದ್ದಾರೆ. ನಾಯಿಗಳು ಇದನ್ನೇ ಆಹಾರವಾಗಿಸಿಕೊಳ್ಳುತ್ತಿವೆ. ಕೆಲವೊಮ್ಮೆ ಏನೂ ಸಿಗದೆ ಇದ್ದಾಗ ಮನುಷ್ಯರ ಮೇಲೆ ಎರಗುತ್ತಿವೆ. ಕಚ್ಚಲು ಬರುತ್ತವೆ. ನಾಯಿಗಳು ತುಂಬಾ ಆಕ್ರಮಣಕಾರಿಯಾಗಿ ವರ್ತಿಸಲು ಇದು ಪ್ರಮುಖ ಕಾರಣ’ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಗಿರೀಶ್‍ಬಾಬು ರೆಡ್ಡಿ ಮಾಹಿತಿ ಹಂಚಿಕೊಂಡರು.
‘ಯಾರಾದರೂ ಕಲ್ಲು ಎಸೆದರೆ ಅವರ ಮೇಲೆ ನಾಯಿಗಳು ದಾಳಿಗೆ ಮುಂದಾಗುತ್ತವೆ. ಹುಚ್ಚು ನಾಯಿಗೆ ಯಾವುದೇ ತೊಂದರೆ ಕೊಡದಿದ್ದರೂ ಅದು ಜನರನ್ನು ಹಿಂಬಾಲಿಸುತ್ತದೆ. ಏಕಾಏಕಿ ದಾಳಿ ನಡೆಸುತ್ತದೆ. ನಾಯಿ ಅದರ ಮರಿ ಮೇಲೆ ಯಾವುದಾದರೊಂದು ವಾಹನ ಹತ್ತಿದರೆ ಅವು ಮುಂದಿನ ದಿನಗಳಲ್ಲಿ ಯಾವುದೇ ವಾಹನ ಕಂಡರೂ ಅಟ್ಟಿಸಿಕೊಂಡು ಬರುತ್ತದೆ. ಸದ್ಯ ನಗರದಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ’ ಎಂದರು.
ನಾಯಿ ಮೇಲೆ ಯಾಕಿಷ್ಟು ಪ್ರೀತಿ?
ಒಂದೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾದರೆ ಮತ್ತೊಂದು ಕಡೆ ಮನೆಗಳಲ್ಲಿ ಸಾಕು ನಾಯಿ ಪ್ರಮಾಣ ಏರಿಕೆ ಕಂಡಿದೆ. ‘ಇತ್ತೀಚೆಗಿನ ದಿನಮಾನಗಳಲ್ಲಿ ಹೆಚ್ಚುತ್ತಿರುವ ಒಂಟಿತನ ಕಡಿಮೆಯಾಗುತ್ತಿರುವ ಸಾಮಾಜಿಕ ಸಂಬಂಧ ನೋವು ಅನುಭವಿಸುವ ಶಕ್ತಿ ಕಡಿಮೆಯಾಗಿ ಜನರು ಪ್ರಾಣಿಗಳ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಇದೇ ಕಾರಣಕ್ಕೆ ನಾಯಿ ಸಾಕುವುದು ಜಾಸ್ತಿಯಾಗಿದೆ’ ಎನ್ನುತ್ತಾರೆ ಮನೋವೈದ್ಯ ಲೋಕೇಶ್‌ಬಾಬು.
‘ಪ್ರತಿಯೊಬ್ಬರು ಪ್ರತಿಷ್ಠೆಗೆ ಬಿದ್ದವರಂತೆ ನಾಯಿ ಸಾಕಾಣಿಕೆ ಮಾಡುತ್ತಿದ್ದಾರೆ. ಮನೆಯ ವ್ಯಕ್ತಿಯಂತೆ ನೋಡಿಕೊಳ್ಳುತ್ತಿದ್ದಾರೆ. ವಿಭಕ್ತ ಕುಟುಂಬಗಳು ಹೆಚ್ಚಾದ ನಂತರ ಎಲ್ಲ ಕಡೆಗಳಲ್ಲಿ ನಾಯಿಗಳು ಸಾಮಾನ್ಯ ಆಗಿವೆ’ ಎಂದು ಪ್ರತಿಕ್ರಿಯಿಸಿದರು.
ಸಚಿವರಿಗೂ ನಾಯಿ ಕಾಟ
‘ಅಗಳಕೋಟೆಯ ಸಿದ್ಧಾರ್ಥ ಕಾಲೇಜಿನ ಕ್ಯಾಂಪಸ್‌ನಲ್ಲೂ ನಾಯಿಗಳ ಕಾಟ ಹೆಚ್ಚಾಗಿದೆ. ನನಗೂ ಅದರ ಬಿಸಿ ತಟ್ಟಿದೆ. ಜನರ ಸಮಸ್ಯೆ ಗಮನಕ್ಕೆ ಬಂದಿದೆ. ನಾಯಿಗಳನ್ನು ಹಿಡಿದು ಬೇರೆ ಕಡೆ ಬಿಡಬೇಕು. ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿ ಕಾನೂನು ಪ್ರಕಾರ ನಾಯಿಗಳ ಸಂಖ್ಯೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.