ADVERTISEMENT

ತುಮಕೂರು: ಬಾಗಿಲಿಗೆ ಸಿಲುಕಿ ವಿದ್ಯಾರ್ಥಿನಿ ಬೆರಳು ತುಂಡು

ಬೆರಳು ಮಾಯ ಮಾಡಿದ ಶಿಕ್ಷಕರು; ಬಿಇಒ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 0:22 IST
Last Updated 14 ಫೆಬ್ರುವರಿ 2026, 0:22 IST
<div class="paragraphs"><p>ಎಫ್‌ಐಆರ್‌</p></div>

ಎಫ್‌ಐಆರ್‌

   

(ಸಾಂದರ್ಭಿಕ ಚಿತ್ರ)

ತುಮಕೂರು: ತಾಲ್ಲೂಕಿನ ಗೂಳೂರು ಸರ್ಕಾರಿ ಶಾಲೆಯಲ್ಲಿ ಈಚೆಗೆ ಕೊಠಡಿ ಬಾಗಿಲಿಗೆ ಸಿಲುಕಿ ವಿದ್ಯಾರ್ಥಿನಿ ಬಲಗೈನ ಎರಡು ಬೆರಳು ತುಂಡಾಗಿದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡಿಸದೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿ ನಾಲ್ವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಗೂಳೂರು ಗ್ರಾಮದ ಅಂಬಿಕಾ, ಬಸವರಾಜು ದಂಪತಿ ಪುತ್ರಿ ಚಿನ್ಮಯಿ 1ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಫೆ.9ರಂದು ಶಾಲೆಯಲ್ಲಿ ಮಧ್ಯಾಹ್ನ ಊಟಕ್ಕೆ ತೆರಳುವಾಗ ಸರತಿ ಸಾಲಿನಲ್ಲಿ ನಿಂತಿದ್ದಳು. ಈ ವೇಳೆ ಕಬ್ಬಿಣದ ಬಾಗಿಲಿನ ಸಂದಿಯಲ್ಲಿ ಕೈ ಇಟ್ಟಿದ್ದಳು. ಹಿಂದೆ ನಿಂತಿದ್ದ ಮಕ್ಕಳು ಬಾಗಿಲನ್ನು ಜೋರಾಗಿ ತಳ್ಳಿದ್ದಾರೆ. ಇದರಿಂದ ಚಿನ್ಮಯಿ ಎರಡು ಬೆರಳು ತುಂಡಾಗಿದೆ.

‘ಮುಖ್ಯ ಶಿಕ್ಷಕ ನಾಗೇಶ್‌, ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ವೆಂಕಟೇಶ್‌ ಇಬ್ಬರೂ ಶಾಲೆಯಲ್ಲಿಯೇ ಇದ್ದರೂ ಘಟನೆ ನಡೆದ ಕೂಡಲೇ ಚಿಕಿತ್ಸೆ ಕೊಡಿಸಿಲ್ಲ. ಮಗು ಒದ್ದಾಡಿದೆ. ನಮಗೂ ತಡವಾಗಿ ಮಾಹಿತಿ ನೀಡಿದ್ದಾರೆ. ತುಂಡಾದ ಬೆರಳನ್ನು ಶಿಕ್ಷಕರು ಹೊರಗಡೆ ಎಸೆದಿದ್ದು, ಅದು ಈವರೆಗೂ ಸಿಕ್ಕಿಲ್ಲ. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿದ್ಯಾರ್ಥಿನಿ ತಾಯಿ ಅಂಬಿಕಾ ನೀಡಿದ ದೂರಿನ ಮೇರೆಗೆ ಬಿಇಒ ಹನುಮಂತಪ್ಪ, ಸಿಆರ್‌ಪಿ ವೆಂಕಟೇಶ್‌, ಶಿಕ್ಷಕರಾದ ನಾಗೇಶ್‌, ರೇಣುಕಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ.

ಪೋಷಕರು ತಡವಾಗಿ ದೂರು ನೀಡಿದ್ದಾರೆ. ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ತುಂಡಾದ ಬೆರಳು ಪತ್ತೆ ಮಾಡುತ್ತಿದ್ದು ಇನ್ನೂ ಸಿಕ್ಕಿಲ್ಲ. ಮಗು ಆರೋಗ್ಯವಾಗಿದೆ
ಕೆ.ವಿ.ಅಶೋಕ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.