ADVERTISEMENT

ಮಗುವಿನ ಬೆರಳು ಕತ್ತರಿಸಿದ ಶಾಲೆಯ ಬಾಗಿಲು

ಬೆರಳು ಮಾಯ ಮಾಡಿದ ಶಿಕ್ಷಕರು; ಬಿಇಒ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 6:01 IST
Last Updated 14 ಫೆಬ್ರುವರಿ 2026, 6:01 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ತಾಲ್ಲೂಕಿನ ಗೂಳೂರು ಸರ್ಕಾರಿ ಶಾಲೆಯಲ್ಲಿ ಈಚೆಗೆ ಕೊಠಡಿಯ ಬಾಗಿಲಿಗೆ ಸಿಲುಕಿ ವಿದ್ಯಾರ್ಥಿನಿಯ ಬಲಗೈನ 2 ಬೆರಳು ತುಂಡಾಗಿದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡಿಸದೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿ ನಾಲ್ವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೂಳೂರು ಗ್ರಾಮದ ಅಂಬಿಕಾ, ಬಸವರಾಜು ದಂಪತಿ ಪುತ್ರಿ ಚಿನ್ಮಯಿ 1ನೇ ತರಗತಿಯಲ್ಲಿ ಓದುತ್ತಿದ್ದಾರೆ. ಫೆ. 9ರಂದು ಶಾಲೆಯಲ್ಲಿ ಮಧ್ಯಾಹ್ನ ಊಟಕ್ಕೆ ತೆರಳುವಾಗ ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಕಬ್ಬಿಣದ ಬಾಗಿಲಿನ ಸಂದಿಯಲ್ಲಿ ಕೈ ಇಟ್ಟಿದ್ದರು. ಹಿಂದೆ ನಿಂತಿದ್ದ ಮಕ್ಕಳು ಬಾಗಿಲನ್ನು ಜೋರಾಗಿ ತಳ್ಳಿದ್ದಾರೆ. ಇದರಿಂದ ಚಿನ್ಮಯಿ ಎರಡು ಬೆರಳು ತುಂಡಾಗಿವೆ.

‘ಮುಖ್ಯ ಶಿಕ್ಷಕ ನಾಗೇಶ್‌, ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ವೆಂಕಟೇಶ್‌ ಶಾಲೆಯಲ್ಲಿಯೇ ಇದ್ದರೂ ಘಟನೆ ನಡೆದ ಕೂಡಲೇ ಚಿಕಿತ್ಸೆ ಕೊಡಿಸಿಲ್ಲ. ನಮಗೂ ತಡವಾಗಿ ಮಾಹಿತಿ ನೀಡಿದ್ದಾರೆ. ನಾವು ಶಾಲೆಗೆ ಹೋಗುವ ತನಕ ಮಗು ಒದ್ದಾಡಿದೆ. ತುಂಡಾದ ಬೆರಳನ್ನು ಶಿಕ್ಷಕರು ಹೊರಗಡೆ ಎಸೆದಿದ್ದು, ಈವರೆಗೂ ಸಿಕ್ಕಿಲ್ಲ. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ವಿದ್ಯಾರ್ಥಿನಿ ತಾಯಿ ಅಂಬಿಕಾ ನೀಡಿದ ದೂರಿನ ಮೇರೆಗೆ ಬಿಇಒ ಹನುಮಂತಪ್ಪ, ಸಿಆರ್‌ಪಿ ವೆಂಕಟೇಶ್‌, ಶಿಕ್ಷಕರಾದ ನಾಗೇಶ್‌, ರೇಣುಕಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ADVERTISEMENT

‘ಘಟನೆ ನಡೆದ ನಂತರ ಕನಿಷ್ಠ ಪ್ರಥಮ ಚಿಕಿತ್ಸೆ ಕೊಡಿಸಿಲ್ಲ. ತುಂಬಾ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಇದು ಹೀಗೆ ಮುಂದುವರಿದರೆ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಗತಿ ಏನಾಗಬೇಡ? ನಿರ್ಲಕ್ಷ್ಯ ತೋರಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ’ ಮನವಿ ಮಾಡಿದ್ದಾರೆ.

ಪೋಷಕರು ತಡವಾಗಿ ದೂರು ನೀಡಿದ್ದಾರೆ. ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ತುಂಡಾದ ಬೆರಳು ಪತ್ತೆ ಮಾಡುತ್ತಿದ್ದು ಇನ್ನೂ ಸಿಕ್ಕಿಲ್ಲ. ಮಗು ಆರೋಗ್ಯವಾಗಿದೆ
ಕೆ.ವಿ.ಅಶೋಕ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.