ADVERTISEMENT

ಸರ್ಕಾರ ಬಲಪಡಿಸಲು ಬಿಜೆಪಿ ಬೆಂಬಲಿಸಿ: ಕೆ.ಎಸ್.ಈಶ್ವರಪ್ಪ

ಶಿರಾದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 2:20 IST
Last Updated 24 ಅಕ್ಟೋಬರ್ 2020, 2:20 IST
ಶಿರಾದಲ್ಲಿ ನಡೆದ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕತ್ತಿ ನೀಡಿ ಸನ್ಮಾನಿಸಲಾಯಿತು
ಶಿರಾದಲ್ಲಿ ನಡೆದ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕತ್ತಿ ನೀಡಿ ಸನ್ಮಾನಿಸಲಾಯಿತು   

ಶಿರಾ: ರಾಜ್ಯ ‌ಸರ್ಕಾರ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳ ಪರವಾಗಿದ್ದು, ಸರ್ಕಾರವನ್ನು ಬಲ ಪಡಿಸಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದರು.

ನಗರದ ಸೋಮೇಶ್ವರ ಕಲ್ಯಾಣ ಮಟ್ಟದಲ್ಲಿ ಶುಕ್ರವಾರ ನಡೆದ ಕುರುಬ ಸಮುದಾಯದ ಮುಖಂಡರ ಸಭೆ ಉದ್ಘಾಟಿಸಿ ಮಾತನಾಡಿದರು. ‌

ಕುರುಬ ಸಮುದಾಯದ ಬಿ.ಕೆ.ಮಂಜುನಾಥ್ ಅವರೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್ ನೀಡುವಂತೆ ನನ್ನ ಮೇಲೆ ಸಹ ಒತ್ತಡ ಬಂದಿತ್ತು. ಆದರೆ ಪಕ್ಷ ರಾಜೇಶ್ ಗೌಡ ಅವರಿಗೆ ಟಿಕೆಟ್ ನೀಡಿದ ಮೇಲೆ, ಮಂಜುನಾಥ್‌ ಅವರು ರಾಜೇಶ್ ಪರ ಕೆಲಸ ಮಾಡುವ ಮೂಲಕ ಪಕ್ಷನಿಷ್ಠೆ ತೋರಿರುವುದು ಸಂತಸದ ವಿಷಯ ಎಂದರು.

ADVERTISEMENT

‘ಕುರುಬ ಸಮುದಾಯದವರು ಒಂದುಬಾರಿ ಮಾತನಾಡಿದರೆ ಯಾವುದೇ ಕಾರಣಕ್ಕೂ ಮಾತು ತಪ್ಪುವುದಿಲ್ಲ. ಈ ಬಾರಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮ ಮೇಲಿದೆ’ ಎಂದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಪರ ಸರ್ಕಾರ ನಡೆಸುತ್ತಿರುವ ಬಿಜೆಪಿಗೆ ಬಲ ನೀಡಲು ಈ ಚುನಾವಣೆಯಲ್ಲಿ ರಾಜೇಶ್ ಗೌಡ ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಮಸಾಲ ಜಯರಾಮ್, ಪೂರ್ಣಿಮಾ ಶ್ರೀನಿವಾಸ್, ಮುಖಂಡರಾದ ವಿಜಯಶಂಕರ್, ಸೊಗಡು ಶಿವಣ್ಣ, ಡಾ. ಹುಲಿನಾಯ್ಕರ್, ಬಿ.ಕೆ.ಮಂಜುನಾಥ್, ಚಂಗಾವರ ಮಾರಣ್ಣ, ರಂಗಸ್ವಾಮಿ ಇದ್ದರು.

ಶ್ರೀರಾಮುಲು: ತಾವರೆಕೆರೆ ಗ್ರಾಮದಲ್ಲಿ ಸಚಿವ ಶ್ರೀರಾಮುಲು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದರು.

ಕಳ್ಳಂಬೆಳ್ಳ ಹೋಬಳಿಯಲ್ಲಿ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ವಿಧಾನ ಪರಿಷತ್‌ ಸದಸ್ಯ ರವಿಕುಮಾರ್, ಸಂಸದ ಪ್ರತಾಪ ಸಿಂಹ, ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಗೌಡ, ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಪ್ರಚಾರ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.