ADVERTISEMENT

ವಿದ್ಯಾರ್ಥಿನಿಯರ ಮೊಬೈಲ್‌ಗೆ ಅಸಭ್ಯ ಸಂದೇಶ ಕಳಿಸುತ್ತಿದ್ದ ಶಿಕ್ಷಕ ಅಮಾನತು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 5:48 IST
Last Updated 21 ಫೆಬ್ರುವರಿ 2023, 5:48 IST
   

ಮಧುಗಿರಿ: ವಿದ್ಯಾರ್ಥಿನಿಯರ ಮೊಬೈಲ್‌ಗಳಿಗೆ ಅಸಭ್ಯ ಸಂದೇಶ ಕಳುಹಿಸುತ್ತಿದ್ದ ಆರೋಪದ ಮೇಲೆ ತಾಲ್ಲೂಕಿನ ಶಿಕ್ಷಕರೊಬ್ಬರನ್ನು ಅಮಾನತು ಮಾಡಿ ಡಿಡಿಪಿಐ ಕೆ.ಜಿ. ರಂಗಯ್ಯ ಸೋಮವಾರ ಆದೇಶಿಸಿದ್ದಾರೆ.

ತಾಲ್ಲೂಕು ದೊಡ್ಡೇರಿ ಹೋಬಳಿಯ ಕೊಟಗಾರಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಪಿ. ನಾಗಭೂಷಣ್ ಅಮಾನತುಗೊಂಡ ಶಿಕ್ಷಕ.

ಶಾಲಾ ವಿದ್ಯಾರ್ಥಿನಿಯರೊಂದಿಗೆ ಗೌರವಯುತವಾಗಿ ವರ್ತಿಸದೆ ಅಸಭ್ಯ ಸಂದೇಶ ಕಳುಹಿಸುವುದು ಹಾಗೂ ಶಾಲಾ ವಿದ್ಯಾರ್ಥಿನಿಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಸಂದರ್ಭದಲ್ಲಿ ಉತ್ತರ ಬರೆದುಕೊಟ್ಟು ಹೆಚ್ಚು ಅಂಕ ನೀಡುತ್ತಿದ್ದರು. ಈ ಆರೋಪಗಳ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದರು. ಶಿಕ್ಷಕ ನಾಗಭೂಷಣ್ ವರ್ತನೆಯನ್ನು ತಿದ್ದಿಕೊಳ್ಳುವುದಾಗಿ ತಿಳಿಸಿ ತಪ್ಪೊಪ್ಪಿಗೆ ಪತ್ರ ನೀಡಿದ್ದಾರೆ.

ADVERTISEMENT

ಶಿಕ್ಷಕರ ಈ ದುರ್ವರ್ತನೆ ವಿದ್ಯಾರ್ಥಿಗಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಶಿಕ್ಷಕರನ್ನು ಇದೇ ಶಾಲೆಯಲ್ಲಿ ಮುಂದುವರೆಸಿದಲ್ಲಿ ತನಿಖೆಗೆ ಅಡ್ಡಿ ಉಂಟುಮಾಡುವ ಸಾಧ್ಯತೆ ಇರುವುದರಿಂದ ಶಿಕ್ಷಕನ ವಿರುದ್ಧ ಶಿಸ್ತುಕ್ರಮ ಜರುಗಿಸಲು ನಿರ್ಣಯಿಸಿ, ಆರೋಪಗಳ ಬಗ್ಗೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.