ADVERTISEMENT

ಹದಿಹರೆಯದವರ ಗೈಡ್‌ ‘ಸ್ನೇಹಾ ಕ್ಲಿನಿಕ್‌’

74 ಸಾವಿರ ಮಕ್ಕಳಿಗೆ ಆಪ್ತ ಸಮಾಲೋಚನೆ; ಆತ್ಮಸ್ಥೈರ್ಯ ತುಂಬುವ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 4:58 IST
Last Updated 29 ಅಕ್ಟೋಬರ್ 2025, 4:58 IST
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿನ ಸ್ನೇಹಾ ಕ್ಲಿನಿಕ್‌
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿನ ಸ್ನೇಹಾ ಕ್ಲಿನಿಕ್‌   

ತುಮಕೂರು: ನಗರದ 13 ವರ್ಷದ ಬಾಲಕ ಡ್ರಗ್ಸ್‌ ವ್ಯಸನಿಯಾಗಿದ್ದ, ಪೋಷಕರ ಮಾತು ಕೇಳುತ್ತಿರಲಿಲ್ಲ. ಶಾಲೆಗೂ ನಿರಂತರವಾಗಿ ಗೈರಾಗುತ್ತಿದ್ದ. ಚಟ ಬಿಡಿಸುವುದು ಪೋಷಕರಿಗೆ ಸವಾಲಾಗಿತ್ತು.

ಮನೆಯಲ್ಲಿ ಗಂಡ– ಹೆಂಡತಿ ಮಧ್ಯೆ ಜಗಳವಾಗಿ, ದಂಪತಿಯ ಮಗಳು ಮಾನಸಿಕವಾಗಿ ಕುಂದಿದ್ದಳು. ಖಿನ್ನತೆಗೆ ಒಳಗಾಗಿದ್ದಳು. ಈ ಇಬ್ಬರು ‘ಸ್ನೇಹಾ ಕ್ಲಿನಿಕ್‌’ ಕದ ತಟ್ಟಿದರು. ಕ್ಲಿನಿಕ್‌ನಲ್ಲಿ ಆಪ್ತ ಸಮಾಲೋಚನೆಗೆ ಒಳ ಪಡಿಸಲಾಯಿತು. ಇಲ್ಲಿನ ಸಿಬ್ಬಂದಿ ಇಬ್ಬರಿಗೂ ಆತ್ಮಸ್ಥೈರ್ಯ ತುಂಬಿದರು. ನಂತರ ಅವರು ಸಹಜ ಬದುಕಿಗೆ ಮರಳಿದರು. ಇವು ಕೇವಲ ಎರಡು ಉದಾಹರಣೆಯಷ್ಟೇ. ಇಂತಹ ಸಾಕಷ್ಟು ಪ್ರಕರಣಗಳು ಪ್ರತಿ ವರ್ಷ ಸ್ನೇಹಾ ಕ್ಲಿನಿಕ್‌ ಹುಡುಕಿಕೊಂಡು ಬರುತ್ತಿವೆ.

ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಡಿ (ಆರ್‌ಕೆಎಸ್‌ಕೆ) ಜಿಲ್ಲೆಯಲ್ಲಿ 2020ರಿಂದ ಸ್ನೇಹಾ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ ಆಸ್ಪತ್ರೆ ಸೇರಿ ಎಲ್ಲ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕ್ಲಿನಿಕ್‌ ತೆರೆಯಲಾಗಿದೆ. ಹದಿಹರೆಯದವರಿಗೆ ಆರೋಗ್ಯದ ಮಹತ್ವ ತಿಳಿಸಲಾಗುತ್ತದೆ. ರಕ್ತಹೀನತೆ, ಅಪೌಷ್ಟಿಕತೆ ತಡೆಗಟ್ಟುವ ಕುರಿತು ಅರಿವು ಮೂಡಿಸಲಾಗುತ್ತಿದೆ.

ADVERTISEMENT

ಜಿಲ್ಲೆಯಾದ್ಯಂತ 2022–23ರಿಂದ 2025ರಲ್ಲಿ 74,096 ಮಂದಿ ಆಪ್ತ ಸಮಾಲೋಚನೆ ಮತ್ತು ವೈದ್ಯಕೀಯ ಸೇವೆ ಪಡೆದಿದ್ದಾರೆ. 10ರಿಂದ 19 ವರ್ಷದ ಮಕ್ಕಳನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲಾಗುತ್ತದೆ. ಬಾಲ ಗರ್ಭಿಣಿಯರು, ಡ್ರಗ್ಸ್ ಚಟಕ್ಕೆ ಬಿದ್ದವರು, ಮಾನಸಿಕ ಖಿನ್ನತೆಗೆ ಒಳಗಾದವರಿಗೆ ತಿಳಿಹೇಳಿ, ಅವರನ್ನು ಸಹಜ ಬದುಕಿಗೆ ತರುವ ನಿಟ್ಟಿನಲ್ಲಿ ಇಲ್ಲಿನ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಶಾಲಾ–ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.

ಹದಿಹರೆಯದವರಲ್ಲಿ ಕಂಡು ಬರುವ ಪೌಷ್ಟಿಕಾಂಶದ ಕೊರತೆ, ಮಾನಸಿಕ ಆರೋಗ್ಯದ ಸಮಸ್ಯೆ, ಲೈಂಗಿಕತೆ ಮತ್ತು ಸಂತಾನೋತ್ಪತ್ತಿ ಸಮಸ್ಯೆ, ಋತುಚಕ್ರ ಸಂಬಂಧಿ ಶುಚಿತ್ವ ಹಾಗೂ ಸೋಂಕು, ಅಸಾಂಕ್ರಾಮಿಕ ರೋಗ, ದುಶ್ಚಟ, ವ್ಯಸನ ತಡೆಗಟ್ಟಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಕ್ಲಿನಿಕ್‌ಗೆ ಬಂದು ಹೋದ ನಂತರ ಅವರ ಮೇಲೆ ನಿಗಾ ವಹಿಸಲಾಗುತ್ತಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಗುರುವಾರ ಮತ್ತು ಶನಿವಾರ ಮಧ್ಯಾಹ್ನ 3ರಿಂದ 5 ಗಂಟೆ ವರೆಗೆ ವೈದ್ಯಕೀಯ ಸೇವೆ ಹಾಗೂ ಆಪ್ತ ಸಮಾಲೋಚನೆ ಪಡೆಯಬಹುದು. ಇಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸೂಚಿಸಲಾಗುತ್ತದೆ. ನಿತ್ಯ ಪೌಷ್ಟಿಕ, ಸಮತೋಲಿತ ಆಹಾರ ಸೇವನೆ ಬಗ್ಗೆ ಮಾರ್ಗದರ್ಶನ ಮಾಡಲಾಗುತ್ತದೆ. ಹದಿಹರೆಯದ ವಯಸ್ಸಿನಲ್ಲಿ ದೈಹಿಕ, ಮಾನಸಿಕ ಮತ್ತು ನಡವಳಿಕೆಯಲ್ಲಿ ಆಗುವ ಬದಲಾವಣೆಗಳ ಕುರಿತು ಸಮರ್ಪಕ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.

ಮಧುಗಿರಿಯಲ್ಲಿ ಸಿಬ್ಬಂದಿ ಇಲ್ಲ

ಪ್ರಸ್ತುತ ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕ್ಲಿನಿಕ್‌ ಆರಂಭಿಸಲಾಗಿದೆ. ಮಧುಗಿರಿ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಧುಗಿರಿಯಲ್ಲಿ ಕಳೆದ ಮೂರು ತಿಂಗಳಿಂದ ಸಿಬ್ಬಂದಿ ನಿಯೋಜಿಸಿಲ್ಲ. ಸಿಬ್ಬಂದಿ ನೇಮಕಕ್ಕೆ ಕ್ರಮಕೈಗೊಳ್ಳಲಾಗಿದೆ. ಆದಷ್ಟು ಬೇಗ ನೇಮಕಾತಿ ಆಗಲಿದೆ ಎಂಬುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಉತ್ತರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.