ಮಧುಗಿರಿ ತಾಲ್ಲೂಕಿನ ಕವಣದಾಲ ಗ್ರಾಮದಲ್ಲಿ ಭಾನುವಾರ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು
ಮಧುಗಿರಿ (ತುಮಕೂರು): ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಕವಣದಾಲ ಗ್ರಾಮದಲ್ಲಿ ಶನಿವಾರ ಪೂಜೆ ಮಾಡಿಸಲು ರಾಮಾಂಜನೇಯ ದೇವಾಲಯ ಪ್ರವೇಶಿಸಿದ್ದ ಪರಿಶಿಷ್ಟ ಜಾತಿಯ ಯುವಕನನ್ನು ಸ್ಥಳೀಯ ಒಕ್ಕಲಿಗ ಸಮುದಾಯದವರು ಹೊರಗಡೆ ಕಳುಹಿಸಿದ್ದಾರೆ.
ಇದೇ ವಿಷಯವಾಗಿ ದೇಗುಲದ ಮುಂಭಾಗದಲ್ಲಿ ಯುವಕ ಮತ್ತು ಒಕ್ಕಲಿಗ ಸಮುದಾಯದವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಕುರಿತು ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.
ಯುವಕ ಶನಿವಾರ ಸಂಜೆ ಪೂಜೆ ಮಾಡಿಸಲು ಗ್ರಾಮದ ರಾಮಾಂಜನೇಯ ದೇವಸ್ಥಾನದ ಒಳಗೆ ಹೋಗಿದ್ದ. ಈ ವೇಳೆ ಸ್ಥಳದಲ್ಲಿದ್ದ ಒಕ್ಕಲಿಗರು ಯುವಕನನ್ನು ಪ್ರಶ್ನಿಸಿದ್ದಾರೆ. ‘ಅನಾದಿ ಕಾಲದಿಂದಲೂ ನಿಮ್ಮ ಜಾತಿಯವರು (ಪರಿಶಿಷ್ಟ ಜಾತಿಯವರು) ದೇಗುಲದ ಒಳಗಡೆ ಬಂದಿಲ್ಲ. ಈಗಲೂ ಬರುವುದು ಬೇಡ’ ಎಂದು ಹೊರಗಡೆ ಕಳುಹಿಸಿದ್ದಾರೆ.
‘ಊರಿನ ಜನರೆಲ್ಲ ಒಳಗಡೆ ಕೂತಿದ್ದಾರೆ. ನಾನೇಕೆ ಹೊರಗಡೆ ನಿಲ್ಲಬೇಕು. ಒಳಗಡೆ ಹೋಗಿದ್ದು ತಪ್ಪು ಎಂದರೆ ಹೇಗೆ? ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಲ್ಲವೇ? ನೀವು ಒಳಗೆ ಹೋಗುವುದಾದರೆ ನಾನೇಕೆ ಹೋಗಬಾರದು? ಸಂವಿಧಾನಕ್ಕೆ ಗೌರವ ಇಲ್ಲವೇ?’ ಎಂದು ಯುವಕ ಪ್ರಶ್ನಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಆಗ ಒಕ್ಕಲಿಗ ಸಮುದಾಯದವರು, ‘ನಿಮ್ಮವರು(ಪರಿಶಿಷ್ಟ ಜಾತಿಯವರು) ಯಾರೂ ಒಳಗೆ ಬಂದಿಲ್ಲ. ಒಬ್ಬರಿಗೆ ಹೇಳಿದರೆ ಉಳಿದವರೂ ಅರ್ಥ ಮಾಡಿಕೊಳ್ಳಬೇಕು. ನೀನು ಒಳಗಡೆ ಹೋಗಬೇಡ’ ಎಂದು ತಾಕೀತು ಮಾಡಿದ್ದಾರೆ. ಇದರಿಂದ ದೇವಾಲಯದ ಬಳಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಈ ಕುರಿತು ಯುವಕ ಭಾನುವಾರ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಗ್ರಾಮಸ್ಥರ ಒತ್ತಾಯದ ಮೇರೆಗೆ ದೂರು ವಾಪಸ್ ಪಡೆದು ಗ್ರಾಮದಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ್, ಡಿವೈಎಸ್‌ಪಿ ಮಂಜುನಾಥ್, ತಹಶೀಲ್ದಾರ್ ಶಿರೀನ್ ತಾಜ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್ ಅವರು ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸಿದರು. ಮುಂದಿನ ದಿನಗಳಲ್ಲಿ ದೇವಸ್ಥಾನ ಪ್ರವೇಶಿಸಲು ಯಾರಿಗೂ ಅಡ್ಡಿಪಡಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.