ADVERTISEMENT

ಖಾಲಿ ನಿವೇಶನಕ್ಕೆ ದುಪ್ಪಟ್ಟು ತೆರಿಗೆಗೆ ತಡೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 1:33 IST
Last Updated 27 ಆಗಸ್ಟ್ 2021, 1:33 IST
ಸದಸ್ಯ ಎಂ.ಕೆ.ಮಧು ಧರಣಿ ನಡೆಸಿದರು
ಸದಸ್ಯ ಎಂ.ಕೆ.ಮಧು ಧರಣಿ ನಡೆಸಿದರು   

ತುಮಕೂರು: ಖಾಲಿ ನಿವೇಶನಕ್ಕೆ ದುಪ್ಪಟ್ಟು ತೆರಿಗೆ ವಿಧಿಸುವುದನ್ನು ತತ್ಕಾಲಿಕವಾಗಿ ಕೈಬಿಡಲಾಗಿದ್ದು, ತೆರಿಗೆ ಕಡಿಮೆ ಮಾಡುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಗುರುವಾರ ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ನಿರ್ಧರಿಸಲಾಯಿತು.

2021 ಫೆಬ್ರುವರಿ 19ರ ಆದೇಶದಂತೆ ತೆರಿಗೆ ಸಂಗ್ರಹಿಸುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸುವುದು. 2019–20ನೇ ಸಾಲಿನಲ್ಲಿ ಇದ್ದಂತೆ ತೆರಿಗೆ ಸಂಗ್ರಹ ಮಾಡುವ ನಿರ್ಧಾರಕ್ಕೆ ಬರಲಾಯಿತು. ತೆರಿಗೆ ಪರಿಷ್ಕರಣೆಗೆ ಮೇಯರ್ ಬಿ.ಜಿ.ಕೃಷ್ಣಪ್ಪ ನೇತೃತ್ವದಲ್ಲಿ ಸಮಿತಿ ರಚಿಸಿ, ಸಮಿತಿ ನೀಡುವ ವರದಿಯ ಆಧಾರದ ಮೇಲೆ ತೆರಿಗೆ ಕಡಿಮೆ ಮಾಡುವಂತೆ ಸರ್ಕಾರವನ್ನು ಕೋರಲು ಸಭೆ ಒಮ್ಮತಕ್ಕೆ ಬಂತು.

ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಖಾಲಿ ನಿವೇಶನಗಳಿಗೆ ಪ್ರಸ್ತುತ ಮಾರ್ಗಸೂಚಿ ದರದ ಆಧಾರದ ಮೇಲೆ ಶೇ 10ರಷ್ಟು ತೆರಿಗೆ ಸಂಗ್ರಹಿಸಲಾಗುತ್ತಿದೆ. ಇದು ಬಡವರು, ಮಧ್ಯಮ ವರ್ಗದವರ ಮೇಲೆ ತೀವ್ರ ಪರಿಣಾಮ ಬೀರಲಿದೆ. ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಂಡು ಸರ್ಕಾರಕ್ಕೆ ಕಳುಹಿಸಿದರೆ ಮುಖ್ಯಮಂತ್ರಿ ಗಮನಕ್ಕೆ ತಂದು ತೆರಿಗೆ ಕಡಿಮೆ ಮಾಡಿಸಿಕೊಡುವುದಾಗಿ ಸಂಸದ ಜಿ.ಎಸ್.ಬಸವರಾಜು ಸಲಹೆ ಮಾಡಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯರು, ಸುದೀರ್ಘವಾಗಿ ಚರ್ಚಿಸಿದರು.

ADVERTISEMENT

ನಿವೇಶನ ಖರೀದಿಸಿದ ಸಮಯದಲ್ಲಿನ ಮಾರ್ಗಸೂಚಿ ದರದ ಆಧಾರದ ಮೇಲೆ ತೆರೆಗೆ ಸಂಗ್ರಹಿಸಬೇಕು ಎಂದು ಕೆಲ ಸದಸ್ಯರು ಒತ್ತಾಯಿಸಿದರು. ಹಿಂದೆ ಕಡಿಮೆ ಬೆಲೆಗೆ ಖರೀದಿಸಿದ್ದರೆ, ಈಗ ಕೊಂಡುಕೊಂಡವರು ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ. ಒಂದೇ ಬಡಾವಣೆಯಲ್ಲಿ ಪ್ರತಿ ನಿವೇಶನಕ್ಕೂ ಪ್ರತ್ಯೇಕವಾಗಿ ತೆರಿಗೆ ನಿಗದಿ ಪಡಿಸಬೇಕಾಗುತ್ತದೆ. ಇದು ತಾರತಮ್ಯದ ಜತೆಗೆ ಜನರಿಗೆ ಹೊರೆಯಾಗುತ್ತದೆ. ಹಾಗಾಗಿ ಸಮಿತಿ ರಚಿಸಿ ಯಾವ ಆಧಾರದ ಮೇಲೆ ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡಬೇಕು ಎಂಬ ಬಗ್ಗೆ ನಿರ್ಧರಿಸಬೇಕು ಎಂದು ಸದಸ್ಯರು ಸಲಹೆ ನೀಡಿದರು. ಮೇಯರ್ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು.

ಸದಸ್ಯ ಧರಣಿ: ಸಭೆಯ ಕಾರ್ಯಸೂಚಿಗೆ ನಗರದ ಸಮಸ್ಯೆಗಳ ವಿಚಾರ ಸೇರಿಸಲು ಪತ್ರ ಕೊಡುವ ಮುನ್ನವೇ ಕಾರ್ಯಸೂಚಿ ಸಿದ್ಧಪಡಿಸಲಾಗಿದೆ. ಇದರಿಂದಾಗಿ ನನಗೆ ಅವಕಾಶವೇ ಸಿಗದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಪಕ್ಷೇತರ ಸದಸ್ಯ ಎಂ.ಕೆ.ಮಧು ಅವರು ಮೇಯರ್ ಎದುರಿನ ಅಂಗಳದಲ್ಲಿ ಧರಣಿ ನಡೆಸಿದರು.

ಸುಮಾರು ಅರ್ಧಗಂಟೆ ಕಾಲ ವಾಗ್ವಾದ ನಡೆಯಿತು. ಸದಸ್ಯರ ಮನವೊಲಿಸಲು ಇತರ ಸದಸ್ಯರು ಮುಂದಾದರು. ಆ ಸಮಯದಲ್ಲಿ ಆಡಳಿತ ಪಕ್ಷ ಬಿಜೆಪಿ ಸದಸ್ಯರು, ‘ಧರಣಿ ಮಾಡಿಕೊಳ್ಳಲಿ. ಕೋರಂ ಇರುವುದರಿಂದ ಸಭೆ ಮುಂದುವರಿಸಿ’ ಎಂದು ಕೇಳಿಕೊಂಡರು. ಇದರಿಂದ ಕೆರಳಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸಭೆಯಿಂದ ಹೊರ ನಡೆಯಲು ಮುಂದಾದರು. ಕೊನೆಗೆ ಸದಸ್ಯರ ಮನವೊಲಿಸಿ ಕರೆತಂದು ಸಭೆ ಮುಂದುವರಿಸಲಾಯಿತು.

ಒಂದು ಗಂಟೆ ತಡ: ಬೆಳಿಗ್ಗೆ 9 ಗಂಟೆಗೆ ಸಭೆ ಕರೆದಿದ್ದು, ಸಭೆ ಆರಂಭವಾಗಿದ್ದು ಒಂದು ಗಂಟೆ ತಡವಾಗಿ. ಸಾಮಾನ್ಯವಾಗಿ ಬೆಳಿಗ್ಗೆ 11 ಗಂಟೆ ವೇಳೆಗೆ ಸಭೆ ಕರೆಯಲಾಗುತಿತ್ತು. ‘ತಡವಾಗಿ ಸಭೆ ಆರಂಭವಾಗುವುದರಿಂದ ಸಾಕಷ್ಟು ವಿಚಾರಗಳು ಚರ್ಚೆಯಾಗುವುದಿಲ್ಲ. 9 ಗಂಟೆಗೆ ಸಭೆ ನಡೆದರೆ ಚರ್ಚಿಸಲು ಸದಸ್ಯರಿಗೆ ಅವಕಾಶ ಸಿಗುತ್ತದೆ’ ಎಂಬ ಕಾರಣಕ್ಕೆ ಬೇಗ ಸಭೆ ಕರೆಯಲಾಗಿತ್ತು. ಆದರೂ ಒಂದು ಗಂಟೆ ತಡವಾಗಿ ಶುರುವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.