ADVERTISEMENT

ತುಮಕೂರು: ತಲ್ವಾರ್ ಝಳಪಿಸಿದ ಆರೋಪಿ ಬಂಧನ

ಹುಟ್ಟುಹಬ್ಬ ಆಚರಣೆ ವೇಳೆ ತಲ್ವಾರ್‌ನಿಂದ ಕೇಕ್ ಕತ್ತರಿಸಿದ್ದರು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 14:28 IST
Last Updated 17 ಅಕ್ಟೋಬರ್ 2024, 14:28 IST
ಸೈಯದ್ ಶಾರೂಖ್
ಸೈಯದ್ ಶಾರೂಖ್   

ತುಮಕೂರು: ಗುಬ್ಬಿ ಪಟ್ಟಣದ ರಸ್ತೆ ಮಧ್ಯದಲ್ಲಿ ನಿಂತು ಹುಟ್ಟುಹಬ್ಬ ಆಚರಿಸಿಕೊಂಡು ತಲ್ವಾರ್‌ಗಳನ್ನು ಪ್ರದರ್ಶಿಸಿ ಜನರಲ್ಲಿ ಭಯ ಹುಟ್ಟಿಸಿದ್ದ ಸಹೋದರರಲ್ಲಿ ಒಬ್ಬನಾದ ಗುಬ್ಬಿ ಕೆಎಚ್‌ಬಿ ಕಾಲೊನಿಯ ಸೈಯದ್ ಶಾರೂಖ್ (26) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತೊಬ್ಬ ಆರೋಪಿ ಶಾರೂಖ್ ಸಹೋದರ ಮುಕೇಶ್ ಪಾಷಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಅ. 12ರಂದು ರಾತ್ರಿ 10.30 ಗಂಟೆ ಸಮಯದಲ್ಲಿ ಗುಬ್ಬಿ ಪಟ್ಟಣದ ಸಂತೆ ಮೈದಾನದಲ್ಲಿ ಇಬ್ಬರು ಸಹೋದರರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ತಲ್ವಾರ್‌ನಿಂದ ಕೇಕ್ ಕತ್ತರಿಸಿದ್ದರು. ನಂತರ ತಲ್ವಾರ್ ಹಿಡಿದು ರಸ್ತೆಯಲ್ಲಿ ಪ್ರದರ್ಶಿಸುತ್ತಾ ಜನರಲ್ಲಿ ಭಯ ಹುಟ್ಟಿಸಿದ್ದರು. ಜನರು ಮುಂದೆ ಹೋಗದಂತೆ ಅಡ್ಡಗಟ್ಟಿ ತಲ್ವಾರ್ ಪ್ರದರ್ಶಿಸಿ, ರಸ್ತೆಯಲ್ಲಿ ಅದರಿಂದ ಗೆರೆ ಎಳೆದು ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದರು. ತಲ್ವಾರ್ ಹಿಡಿದು ಜೋರಾಗಿ ಚೀರಾಡಿ, ವಿಚಿತ್ರವಾಗಿ ವರ್ತಿಸಿ ಜನರನ್ನು ಬೆದರಿಸಿದ್ದರು. ಜನರ ಎದುರು ಸಿನಿಮಾ ಶೈಲಿಯಲ್ಲಿ ವರ್ತಿಸಿದ್ದರು.

ADVERTISEMENT

ಸಾರ್ವಜನಿಕವಾಗಿ ತಲ್ವಾರ್‌ನಿಂದ ಕೇಕ್ ಕತ್ತರಿಸಿ, ಜನರಿಗೆ ಬೆದರಿಕೆ ಹಾಕಿದ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿತ್ತು. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸರ ಕಾರ್ಯವೈಖರಿ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು.

ಈ ವಿಚಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಗಮನಕ್ಕೆ ಬಂದ ತಕ್ಷಣ ಗುಬ್ಬಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.