ADVERTISEMENT

ತಿಪಟೂರು: ಎತ್ತಿನಹೊಳೆಗೆ ಭೂಸ್ವಾಧೀನದ ಸವಾಲು, ಆಮೆಗತಿಯಲ್ಲಿ ಸಾಗುತ್ತಿದೆ ಕಾಮಗಾರಿ

ಸುಪ್ರತೀಕ್.ಎಚ್.ಬಿ.
Published 14 ಆಗಸ್ಟ್ 2023, 8:29 IST
Last Updated 14 ಆಗಸ್ಟ್ 2023, 8:29 IST
ತಿಪಟೂರು ತಾಲ್ಲೂಕಿನಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿರುವ ಸ್ಥಳ
ತಿಪಟೂರು ತಾಲ್ಲೂಕಿನಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿರುವ ಸ್ಥಳ   

ತಿಪಟೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಹಲವು ಅಡೆತಡೆಗಳಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದೆ. ಯೋಜನೆಯ ಭೂ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿದ್ದಾರೆ.

ರಾಜ್ಯದ ಬೃಹತ್ ನೀರಾವರಿ ಯೋಜನೆಗಳಲ್ಲಿ ಒಂದಾದ ನೇತ್ರಾವತಿ ನದಿಯ 24.01 ಟಿಎಂಸಿ ಅಡಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ತುಮಕೂರು ಜಿಲ್ಲೆಗಳಿಗೆ ಹರಿಸುವ ಸಲುವಾಗಿ ಸುಮಾರು ₹1,500 ಕೋಟಿಯಿಂದ ₹2 ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ ಪ್ರಾರಂಭವಾದ ಯೋಜನೆ ನನೆಗುದಿಗೆ ಬಿದ್ದಿದೆ.

ತಾಲ್ಲೂಕಿನಲ್ಲಿಯೂ ಯೋಜನೆ ಹಾದು ಹೋಗಲಿದ್ದು, 2017ರಲ್ಲಿ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿತ್ತು. ತಾಲ್ಲೂಕಿನಲ್ಲಿ ಒಟ್ಟು 43 ಕಿ.ಮೀ. ಉದ್ದದಲ್ಲಿ ಕಾಲುವೆ ನಿರ್ಮಾಣವಾಗಲಿದ್ದು, ಸುಮಾರು 921 ಎಕರೆ ಜಾಗದ ಅಗತ್ಯ ಇದೆ. ಇದರಲ್ಲಿ ಹಲವು ಸರ್ಕಾರಿ ಜಾಗವಿದ್ದರೆ, ಸ್ವಲ್ಪ ಅರಣ್ಯ ಪ್ರದೇಶ ಹಾಗೂ ರೈತರ ಫಲವತ್ತಾದ ಕೃಷಿ ಭೂಮಿಯನ್ನೂ ಒಳಗೊಂಡಿದೆ. ರೈತರ ಭೂಮಿಗೆ ನೀಡಬೇಕಾದ ಪರಿಹಾರದ ಮೊತ್ತ ಅಂದಾಜು ₹374 ಕೋಟಿಯಲ್ಲಿ ಸದ್ಯ ₹100 ಕೋಟಿ ಪರಿಹಾರ ಮಾತ್ರ ಮಂಜೂರಾಗಿದೆ. ಈ ಹಣ ಇನ್ನೂ ರೈತರನ್ನು ತಲುಪಿಲ್ಲ.

ADVERTISEMENT

ಯೋಜನೆಯಿಂದ ತಾಲ್ಲೂಕಿನ ಹಲವು ಕೆರೆಗಳಿಗೂ ಕುಡಿಯುವ ಸಲುವಾಗಿ ನೀರು ಬಳಸಿಕೊಳ್ಳಲು ಯೋಜನೆ ರೂಪಿಸಿದ್ದು, ಪ್ರಾರಂಭದಲ್ಲಿ 0.37 ಟಿಎಂಸಿ ಅಡಿ ನೀರು ನೀಡಲಾಗಿತ್ತು. ಆದರೆ ಹಲವು ವಿರೋಧ, ಪ್ರತಿಭಟನೆ ನಂತರ ಜನಪ್ರತಿನಿಧಿಗಳ ಪ್ರಯತ್ನದಿಂದ 0.81 ಟಿಎಂಸಿ ಅಡಿ ನೀರನ್ನು ನೀಡಲು ನಿರ್ಧರಿಸಲಾಗಿದೆ.

2017ರಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, ಕೇವಲ 16 ಕಿ.ಮೀ. ಉದ್ದದಲ್ಲಿ ಮಾತ್ರವೇ ಕಾಮಗಾರಿ ಪ್ರಾರಂಭಿಸಿದ್ದಾರೆ. ಉಳಿದ 27 ಕಿ.ಮೀ ಕಾಮಗಾರಿ ಹಾಗೆಯೇ ಉಳಿದಿದೆ.

ತಾಲ್ಲೂಕಿನ ಸರ್ವೆ ಪ್ರಕಾರ ರೈತರ ಜಮೀನಿಗೆ ಭೂ ಪರಿಹಾರ ನೀಡದೆ ಭೂಮಿ ಸ್ವಾಧೀನಪಡಿಸಿಕೊಂಡಿಲ್ಲ. ಇನ್ನೂ ಕೆಲ ಕಡೆಗಳಲ್ಲಿ ರೈತರ ಬೆಳೆಗಳಿಗೆ ಬೆಳೆ ಪರಿಹಾರ ಮಾತ್ರ ನೀಡಿ ಕಾಮಗಾರಿ ಪ್ರಾರಂಭಿಸಿದ್ದು, ಬೆಲೆ ನಿಗದಿ ಮಾಡದೇ ಸ್ವಾಧೀನ ಭೂಮಿಗೆ ಪರಿಹಾರ ನೀಡಿಲ್ಲ. ಪರಿಹಾರವೂ ಇಲ್ಲದೇ ಭೂಮಿಯೂ ಇಲ್ಲದೇ, ಹಲವು ವರ್ಷಗಳಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಯೋಜನೆಯಿಂದ ನೀರಾವರಿ ಸೌಕರ್ಯ ಸಿಗಲಿದೆ ಎಂಬ ಉದ್ದೇಶದಿಂದ ಹಲವೆಡೆ ರೈತರು ಭೂಮಿ ಹಸ್ತಾಂತರಿಸಲು ಸಿದ್ಧರಿದ್ದರೂ ಬೆಲೆ ನಿಗದಿ ಮಾಡಿ ಸ್ವಾಧೀನಪಡಿಸಿಕೊಳ್ಳಲಾಗದೆ ಅಧಿಕಾರಿಗಳು ಒದ್ದಾಡುತ್ತಿದ್ದಾರೆ. ಶನಿವಾರ ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಗೃಹ ಸಚಿವರ ಗಮನಕ್ಕೂ ಬಂದಿದ್ದು ಕಾಮಗಾರಿಗೆ ಚುರುಕು ನೀಡಲು ಆದೇಶಿಸಿದ್ದಾರೆ.

ತಿಪಟೂರು ತಾಲ್ಲೂಕಿನಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿರುವ ಸ್ಥಳ

ಹಿಗ್ಗುತ್ತಿದೆ ಯೋಜನೆಯ ಬಜೆಟ್‌

ಎತ್ತಿನಹೊಳೆ ಯೋಜನೆಗೆ ತಾಲ್ಲೂಕಿಗೆ ಅಗತ್ಯವಿರುವ ಅಂದಾಜು ₹374 ಕೋಟಿ ಪರಿಹಾರದಲ್ಲಿ ₹100 ಕೋಟಿ ಮಾತ್ರ ಬಿಡುಗಡೆಯಾಗಿದೆ.  ಉಳಿದ ಹಣದ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ. ರೈತರು ತಮ್ಮ ಭೂಮಿಗೆ ಸಮರ್ಪಕ ಬೆಲೆ ನೀಡುವಂತೆ ಹಲವೆಡೆ ಪಟ್ಟು ಹಿಡಿದಿದ್ದಾರೆ. ಹಳೇಪಾಳ್ಯ ಈಡೇನಹಳ್ಳಿ ಕರಡಿ ಚೌಡ್ಲಾಪುರ ಗ್ರಾಮದ ಬಳಿ ಭೂಮಿ ಬಿಟ್ಟುಕೊಡದೆ ರೈತರು ಪ್ರತಿಭಟನೆ ಹೋರಾಟ ನಡೆಸುತ್ತಿದ್ದಾರೆ. ದಿನದಿಂದ ದಿನಕ್ಕೆ ಭೂಮಿಯ ಬೆಲೆಯೂ ಹೆಚ್ಚಾಗುತ್ತಿದ್ದು ಯೋಜನೆಯ ಬಜೆಟ್ ಗಾತ್ರವು ಹೆಚ್ಚಾಗುವ ಸಾಧ್ಯತೆ ಇದೆ.

ಕಡಿಮೆ ಬೆಳೆ ಪರಿಹಾರ

ಎತ್ತಿನಹೊಳೆ ಯೋಜನೆಗೆ ರೈತರ ಕೃಷಿ ಭೂಮಿಯಲ್ಲಿ ಸರ್ವೆ ಮಾಡಿ ನೋಟಿಸ್ ನೀಡಿದಾಗ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡು ಕಡಿಮೆ ಮೊತ್ತದ ಬೆಳೆ ಪರಿಹಾರ ನೀಡಿದ್ದಾರೆ. 2016ರಲ್ಲಿ ಭೂ ಸ್ವಾಧೀನ ನೋಟಿಫಿಕೇಷನ್ ನೀಡಿದ್ದು 2023ರರವರಗೆ ನಿರ್ದಿಷ್ಟ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿಲ್ಲ. ಪುನರ್ ವಸತಿ ಮತ್ತು ಪುನರ್ ನಿರ್ಮಾಣ 2013 ಕಾಯ್ದೆ ಪ್ರಕಾರ ಹಳೆ ನೋಟಿಫಿಕೇಷನ್ ಬದಲಾಗಿ ಹೊಸ ನೋಟಿಫಿಕೇಷನ್ ಮಾಡಿ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಮನೋಹರ್ ಪಟೇಲ್ ರೈತ ಭೈರನಾಯಕನಹಳ್ಳಿ ನೆಮ್ಮದಿ ಕಳೆದಿದೆ ಯೋಜನೆ ಬಂದಾಗಿನಿಂದಲೂ ನೆಮ್ಮದಿಯ ಜೀವನ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಎಷ್ಟು ಜಮೀನು ಹೋಗುತ್ತದೇ ಎಷ್ಟು ಹಣ ಬರುತ್ತದೆ ಎಂಬ ಮಾಹಿತಿ ಇಲ್ಲದಂತಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಭೂಮಿಯ ಬೆಲೆ ಗಗನಕ್ಕೆ ಹೋಗಿದ್ದು ಸರಿಯಾದ ಬೆಲೆ ನೀಡದಿದ್ದರೆ ಯೋಜನೆ ಮಾಡಲು ರೈತರ ಬಿಡುವುದಿಲ್ಲ. ರಂಗಸ್ವಾಮಿ ನಾಗತೀಹಳ್ಳಿ

ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಳೆದ ಕೆಲವು ವರ್ಷಗಳಿಂದ ಯೋಜನೆಗೆ ಪರಿಹಾರ ಬಿಡುಗಡೆಯಾಗದ ಕಾರಣ ಕಾಮಗಾರಿಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ತಾಲ್ಲೂಕಿನ ಯೋಜನೆಯಲ್ಲಿ ಇರುವ ಎಲ್ಲ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಲಾಗುವುದು.
-ಶಶಾಂಕ್ ತಿಪಟೂರು-ಅರಸೀಕೆರೆ ವಿಭಾಗ ಎಇಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.