ADVERTISEMENT

ಚಿಕ್ಕನಾಯಕನಹಳ್ಳಿ: ರಾಗಿ ಬಿತ್ತನೆಗೆ ಮಳೆ ತಂದ ಸವಾಲು

ಬಿತ್ತನೆ ಸಮಯ ಮುಗಿದು ಹೋಗುವ ಅತಂಕದಲ್ಲಿ ರೈತರು: ಹೊಲದಲ್ಲಿ ಹೆಚ್ಚಿದ ಕಳೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 3:09 IST
Last Updated 25 ಜುಲೈ 2021, 3:09 IST
ಬಿತ್ತನೆಗೆ ಸಜ್ಜುಗೊಳಿಸಿದ್ದ ಹೊಲದಲ್ಲಿ ಕಳೆ ಬೆಳೆದಿದೆ
ಬಿತ್ತನೆಗೆ ಸಜ್ಜುಗೊಳಿಸಿದ್ದ ಹೊಲದಲ್ಲಿ ಕಳೆ ಬೆಳೆದಿದೆ   

ಚಿಕ್ಕನಾಯಕನಹಳ್ಳಿ: ತಾಲ್ಲೂಕು ವ್ಯಾಪ್ತಿಯಲ್ಲಿ ಹಿಂಗಾರು ಬಿತ್ತನೆಯಲ್ಲಿ ರಾಗಿ, ನವಣೆ ಸೇರಿದಂತೆ ಇತರ ಧಾನ್ಯಗಳನ್ನು ಬಿತ್ತನೆ ಮಾಡಲು ಸಕಾಲ. ಆದರೆ ಕಳೆದ 10 ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಸೋನೆ ಮಳೆಯಿಂದ ಬಿತ್ತನೆ ಕಾರ್ಯ ನಡೆಯದೆ, ಸಮಯ ಮುಗಿದು ಹೋಗುವ ಅತಂಕ ರೈತರನ್ನು ಕಾಡುತ್ತಿದೆ.

ಸಾಮಾನ್ಯವಾಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಆರ್ದ್ರಾ, ಪುನರ್ವಸು, ಪುಷ್ಯಾ ಮಳೆಯ ಸಮಯ ರಾಗಿ ಬಿತ್ತನೆಗೆ ಪೂರಕ. ಈಗಾಗಲೇ ಆರ್ದ್ರಾ, ಪುನರ್ವಸು ಮಳೆಗಳ ಸಮಯ ಮಗಿದು ಹೋಗಿದ್ದು ಪುಷ್ಯಾ ಮಳೆ ಇನ್ನು ಕಲ ದಿನ ಮಾತ್ರ ಬಾಕಿ ಉಳಿದಿದೆ. ಆರ್ದ್ರಾ ಮಳೆಯ ಕೊನೆ ದಿನಗಳಿಂದ ಇಲ್ಲಿಯವರೆಗೂ ಸೋನೆ ಮಳೆಯ ಸಿಂಚನ ತಾಲ್ಲೂಕು ವ್ಯಾಪ್ತಿಯ ಅಲ್ಲಲ್ಲಿ ಆಗುತ್ತಿದ್ದರೂ ಬಿತ್ತನೆಗೆ ಬಿಡುವು ಮಾಡಿ ಕೊಡದಿರುವುದು ರೈತರನ್ನು ಅತಂಕಕ್ಕೆ ದೂಡಿದೆ.

ಸದ್ಯ ದೀರ್ಘಾವಧಿ ರಾಗಿ ಬೀಜದ ತಳಿಗಳ ಬಿತ್ತನೆ ಸಮಯ ಮುಗಿದು ಹೋಗಿದೆ. ಪ್ರಸ್ತುತ ಅಲ್ಪಾವಧಿ ತಳಿಯ ಬೀಜಗಳನ್ನು ಬಿತ್ತನೆ ಮಾಡುವ ಅವಕಾಶವಿದ್ದರೂ, ಸೋನೆ ಮಳೆಯು ಎಡೆಬಿಡದೆ ಬೀಳುತ್ತಿರುವುದು ರೈತರ ನಿದ್ದೆಗೆಡಿಸಿದೆ. ವಿವಿಧ ಕಡೆ ರಾಗಿ ಪೈರು ನಾಟಿ ಮಾಡುವ ಪರಿಪಾಠವಿದ್ದು, ಈಗಾಗಲೇ ಸಸಿ ಮಡಿಗಳನ್ನು ಮಾಡಿಕೊಂಡಿದ್ದು ಪೈರು ನಾಟಿಯ ಸಮಯ ಮೀರುತ್ತಿದೆ.

ADVERTISEMENT

ಬಿತ್ತನೆ ಹೊಲದಲ್ಲಿ ಕಳೆ: 20 ದಿನಗಳ ಹಿಂದೆ ಬಿದ್ದ ಸೋನೆ ಮಳೆಗೆ ರಾಗಿ ಬಿತ್ತನೆಗೆ ಹೊಲಗಳನ್ನು ರೈತರು ಸಿದ್ಧಪಡಿಸಿಕೊಂಡಿದ್ದರು. ಎರಡು ಬಾರಿ ಬೇಸಾಯ ಮಾಡಿ ಕುಂಟೆ ಹೊಡೆದು ಸ್ವಚ್ಛಗೊಂಡಿದ್ದ ಹೊಲಗಳಲ್ಲಿ ಸೋನೆ ಮಳೆಯಿಂದ ಕಳೆ ಬೆಳೆದು ನಿಂತಿದೆ. ಈಗ ಸೋನೆ ಮಳೆ ಕಡಿಮೆಯಾದರೂ ಬಿತ್ತನೆ ಮಾಡಲು ಆಗದು ಎನ್ನುವುದು ರೈತರ ಅಭಿಪ್ರಾಯ. ಮತ್ತೊಮ್ಮೆ ಗೇಯ್ಮೆ ಮಾಡಿ ಕುಂಟೆ ಹಾಕಿ ಕಳೆ ತೆಗೆದು ಸ್ವಚ್ಛ ಮಾಡುವಷ್ಟರಲ್ಲಿ ಕಾಲ ಮಿಂಚಿ ಹೋಗುತ್ತದೆ ಎಂಬ ಭಯವೂ ಕಾಡುತ್ತಿದೆ.

ಮುಂಗಾರಿನಲ್ಲಿ ಬಿತ್ತಿದ ಹೆಸರು ಬೆಳೆಯನ್ನು ತೆರವುಗೊಳಿಸಿ ಅದೇ ಹೊಲಗಳಿಗೆ ರಾಗಿ ಬಿತ್ತನೆ ಮಾಡುವ ಪರಿಪಾಠವಿದೆ. ಆದರೆ ಹೆಸರುಕಾಳನ್ನೇ ಹೊಲಗಳಿಂದ ಬೇರ್ಪಡಿಸಲು ಆಗದಿರುವಾಗ ಹೊಲ ಸ್ವಚ್ಛಗೊಳಿಸುವುದು ಕನಸಿನ ಮಾತು ಎನ್ನುವುದು ರೈತರ ಅಭಿಪ್ರಾಯ. ಒಟ್ಟಾರೆ ಬಿತ್ತನೆಗೆ ಪೂರಕ ಹದವಿದ್ದರೂ ಬಿತ್ತನೆಗೆ ಅನುವು ಮಾಡಿಕೊಡದೆ ಬೀಳುತ್ತಿರುವಸೋನೆ ಮಳೆ ರೈತರಿಗೆ ಶಾಪವಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.