ADVERTISEMENT

ಆಸ್ಪತ್ರೆಗಿಂತ ಮನೆ ಬೆಸ್ಟ್

​ಪ್ರಜಾವಾಣಿ ವಾರ್ತೆ
Published 1 ಮೇ 2021, 5:06 IST
Last Updated 1 ಮೇ 2021, 5:06 IST
ಟಿ.ಜೆ.ಉದೇಶ್
ಟಿ.ಜೆ.ಉದೇಶ್   

ತುಮಕೂರು: ಕೊರೊನಾ ಸೋಂಕು ಖಚಿತಪಟ್ಟವರು ಆಸ್ಪತ್ರೆಗೆ ಹೋಗುವುದಕ್ಕಿಂತ ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಚಿಕಿತ್ಸೆ, ಆರೈಕೆಗೆ ಮನೆಯೇ ಬೆಸ್ಟ್ ಎನ್ನುತ್ತಾರೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್.

ಕೊರೊನಾ ಸೋಂಕು ದೃಢಪಟ್ಟ ನಂತರ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ತಮ್ಮ ಅನುಭವಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

‘ಸೋಂಕು ಖಚಿತವಾಗುತ್ತಿದ್ದಂತೆ ಹಲವರು ಆತಂಕಕ್ಕೆ ಒಳಗಾಗುತ್ತಾರೆ. ಭಯ ಪಡಬೇಕಿಲ್ಲ. ವೈದ್ಯರ ಸಲಹೆ
ಪಡೆದುಕೊಂಡು, ದೇಹದ ಆಮ್ಲಜನಕದ ಪ್ರಮಾಣ ಪರೀಕ್ಷಿಸಿಕೊಂಡು ಮನೆಯಲ್ಲೇ ಇದ್ದು ಚೇತರಿಸಿಕೊಳ್ಳ
ಬಹುದು. ನಾನೂ ಆಸ್ಪತ್ರೆಗೆ ದಾಖಲಾಗದೆ14 ದಿನಗಳ ಕಾಲ ಮನೆಯಲ್ಲೇ ಇದ್ದು,ವೈದ್ಯರು ನೀಡಿದ ವಿಟಮಿನ್ ಮಾತ್ರೆಗಳನ್ನು ಸೇವಿಸಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ’ ಎಂದರು.

ADVERTISEMENT

‘ಮನೆಯಲ್ಲಿ ಚಿಕಿತ್ಸೆ ಪಡೆಯುವಾಗ ದೇಹದ ಆಮ್ಲಜನಕದ ಪ್ರಮಾಣ ಪರೀಕ್ಷಿಸಿ ಕೊಳ್ಳುವುದು ಅತಿಮುಖ್ಯ. ಮನೆಯಲ್ಲಿ ಪಲ್ಸ್ ಆಕ್ಸಿ ಮೀಟರ್ ಇಟ್ಟುಕೊಳ್ಳಬೇಕು. ಆಮ್ಲಜನಕದ ಪ್ರಮಾಣ 94ಕ್ಕಿಂತ ಕಡಿಮೆಯಾದರೆ ಮಾತ್ರ ಆಸ್ಪತ್ರೆಗೆ ಹೋಗಬೇಕು. 6 ನಿಮಿಷಗಳ ಕಾಲ (ವಯಸ್ಸಾದವರಿಗೆ 3 ನಿಮಿಷ) ಬಿರುಸು ನಡಿಗೆ ಮಾಡಿದ ನಂತರ ಪಲ್ಸ್ ಆಕ್ಸಿ ಮೀಟರ್‌ನಿಂದ ದೇಹದ ಆಮ್ಲಜನಕದ ಪ್ರಮಾಣ ಪರೀಕ್ಷಿಸಬೇಕು. ನಡಿಗೆ ನಂತರ ಪರೀಕ್ಷಿಸಿದರೆ ನಿಖರವಾಗಿ ತೋರಿಸುತ್ತದೆ. ಇದು 95ಕ್ಕಿಂತ ಹೆಚ್ಚಿದ್ದರೆ ಯಾವುದೇ ಸಮಸ್ಯೆ ಇಲ್ಲ. ಇದಕ್ಕಿಂತ ಕಡಿಮೆಯಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸೋಂಕು ಕಾಣಿಸಿಕೊಂಡವರೆಲ್ಲ ಆಸ್ಪತ್ರೆಗೆ ಹೋಗಬೇಕಾಗಿಲ್ಲ. ಅನಗತ್ಯವಾಗಿ ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸಬಹುದು. ಧೈರ್ಯ ಮುಖ್ಯ’ ಎಂದು ತಮ್ಮ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.