ADVERTISEMENT

ತುಮಕೂರು: ಹಳ್ಳಿಯ ಚಿತ್ರ ಕಟ್ಟಿಕೊಟ್ಟ ಸಿರಿಧಾನ್ಯ ಹಬ್ಬ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 5:40 IST
Last Updated 31 ಡಿಸೆಂಬರ್ 2023, 5:40 IST
<div class="paragraphs"><p>ತುಮಕೂರಿನಲ್ಲಿ ಶನಿವಾರ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಿರಿ ಧಾನ್ಯ ಹಬ್ಬದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಕಬ್ಬಿಣದ ಊರು ಗೋಲನ್ನು&nbsp;ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ವೀಕ್ಷಿಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಜಿ.ಪಂ ಸಿಇಒ ಜಿ.ಪ್ರಭು, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಇತರರು ಉಪಸ್ಥಿತರಿದ್ದರು</p></div>

ತುಮಕೂರಿನಲ್ಲಿ ಶನಿವಾರ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಿರಿ ಧಾನ್ಯ ಹಬ್ಬದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಕಬ್ಬಿಣದ ಊರು ಗೋಲನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ವೀಕ್ಷಿಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಜಿ.ಪಂ ಸಿಇಒ ಜಿ.ಪ್ರಭು, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಇತರರು ಉಪಸ್ಥಿತರಿದ್ದರು

   

ತುಮಕೂರು: ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಶನಿವಾರ ಹಳ್ಳಿಯ‌ ವಾತಾವರಣ ಕಂಡು ಬಂತು. ಹಳ್ಳಿಗಾಡಿನಿಂದ ಕಣ್ಮರೆಯಾಗುತ್ತಿರುವ ಮರದ ನೇಗಿಲು, ರಾಗಿ ಜರಡೆ, ಎತ್ತಿನ ಬಂಡಿಗಳು ಗಮನ ಸೆಳೆದವು.

ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಿರಿ ಧಾನ್ಯ ಹಬ್ಬ ಹಾಗೂ ಸಿರಿ ಧಾನ್ಯ ಉತ್ಪಾದಕರು ಮತ್ತು ಮಾರುಕಟ್ಟೆದಾರರ ಕಾರ್ಯಾಗಾರದ ಪ್ರಯುಕ್ತ ಅಳಿವಿನಂಚಿನಲ್ಲಿರುವ ಅನೇಕ ಕೃಷಿ ಉಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ADVERTISEMENT

ರಾಗಿ ಕಣ ಮಾಡಿ, ಗುಡಿಸಲು ನಿರ್ಮಿಸಿ ಬರಗು, ಸಾಮೆ, ಹಾರಕ, ನವಣೆ, ಊದಲು ಸೇರಿದಂತೆ ವಿವಿಧ ಸಿರಿ ಧಾನ್ಯಗಳನ್ನು ಪ್ರದರ್ಶಿಸಲಾಯಿತು. 60ಕ್ಕೂ ಹೆಚ್ಚು ಸಿರಿ ಧಾನ್ಯ ಉತ್ಪಾದಕರ ಮಳಿಗೆಗಳನ್ನು ತೆರೆಯಲಾಗಿತ್ತು. ಹಲವು ಬಗೆಯ ಕೃಷಿ ಉಪಕರಣಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು. ಆಧುನಿಕ ಉಪಕರಣಗಳನ್ನು ಬಳಸಿಕೊಂಡು, ಉತ್ತಮ ಇಳುವರಿ ತೆಗೆಯುವ ಕುರಿತು ತಿಳಿಸಿಕೊಡಲಾಯಿತು.

ಕೃಷಿ ಕ್ಷೇತ್ರದಿಂದಲೇ ಕಣ್ಮರೆಯಾಗುತ್ತಿರುವ ಮರದ ನೇಗಿಲು, ರಾಗಿ ಬೀಸುವ ಕಲ್ಲು, ರಾಗಿ ಜರಡೆ, ಎತ್ತಿನ ಗಾಡಿಯ ನೊಗ, ಗಾರೆ, ಪಿಕಾಸಿ, ಗುದ್ದಲಿ, ಒನಕೆ ಸೇರಿದಂತೆ ಅನೇಕ ಕೃಷಿ ಉಪಕರಣಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ದವಸ ಧಾನ್ಯಗಳನ್ನು ಅಳೆಯುತ್ತಿದ್ದ ಸೇರು, ಪಾವು, ಅಚ್ಚೇರುಗಳನ್ನು ಜನತೆಗೆ ಪರಿಚಯಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಜೂನಿಯರ್‌ ಕಾಲೇಜು ಮೈದಾನದ ಮುಂಭಾಗದಲ್ಲಿರುವ ಬಿ.ಎಚ್.ರಸ್ತೆಯಿಂದ ಎತ್ತಿನ ಬಂಡಿ ಮೆರವಣಿಗೆಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಬಂದರು. ಅಲಂಕೃತ ಬಂಡಿಯಲ್ಲಿ ಹೆಗಲು ಮೇಲೆ ಹಸಿರು ಶಾಲು ಹಾಕಿಕೊಂಡು ಬಂಡಿ ಓಡಿಸಿದರು. ರಾಗಿಯ ಕಣಕ್ಕೆ ಪೂಜೆ ಸಲ್ಲಿಸಿ, ಕೃಷಿ ಉಪಕರಣ, ಸಿರಿ ಧಾನ್ಯಗಳನ್ನು ವೀಕ್ಷಿಸಿದರು.

ತುಮಕೂರಿನಲ್ಲಿ ಶನಿವಾರ ಕೃಷಿ ಇಲಾಖೆ ಆಯೋಜಿಸಿದ್ದ ಸಿರಿ ಧಾನ್ಯ ಹಬ್ಬಕ್ಕೆ ಸಚಿವ ಜಿ.ಪರಮೇಶ್ವರ ಎತ್ತಿನಗಾಡಿಯಲ್ಲಿ ಬಂದರು
ರೈತರ ಬೆನ್ನು ಮುರಿಯಬಾರದು
‘ರೈತರ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕೆಲವು ಸಲ ಉತ್ಪನ್ನಗಳನ್ನು ಮಾರಾಟ ಮಾಡಿ 6 ತಿಂಗಳು ಕಳೆದರೂ ಎಪಿಎಂಸಿ ಕೃಷಿ ಇಲಾಖೆಯಿಂದ ರೈತರಿಗೆ ದುಡ್ಡು ಬರಲ್ಲ. ಉತ್ಪನ್ನ ಮಾರಾಟ ಮಾಡಿದ ತಕ್ಷಣಕ್ಕೆ ಹಣ ನೀಡುವ ವ್ಯವಸ್ಥೆ ಬರಬೇಕು. ಸರ್ಕಾರ ಈ ಬಗ್ಗೆ ಗಮನ ಹರಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಿಳಿಸಿದರು. ಸಿರಿ ಧಾನ್ಯ ಹಬ್ಬ ಉದ್ಘಾಟಿಸಿ ಮಾತನಾಡಿ ರೈತರು ದೇಶದ ಬೆನ್ನೆಲುಬು ಎನ್ನುತ್ತೇವೆ. ಆದರೆ ಅವರ ಬೆನ್ನು ಮುರಿಯುವ ಕೆಲಸ ಮಾಡಬಾರದು. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಕೈ ಸಾಲ ಬ್ಯಾಂಕ್‌ ಸಾಲ ಜಾಸ್ತಿ ಆಗಿದೆ ಎಂದು ಕೆಟ್ಟ ಆಲೋಚನೆ ಮಾಡಬಾರದು. ಕೈ ಸಾಲ ಕೊಡುವ ಪದ್ಧತಿ ನಿಲ್ಲಬೇಕು. ಶೋಷಣೆ ಮಾಡಬಾರದು ಎಂಬ ಕಾನೂನು ತಂದಿದ್ದೇವೆ ಎಂದು ಹೇಳಿದರು. ಸಿರಿ ಧಾನ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಹಾಸ್ಟೆಲ್‌ಗಳಲ್ಲಿ ಸಿರಿ ಧಾನ್ಯಗಳ ಬಳಕೆ ಹೆಚ್ಚು ಮಾಡಬೇಕು ಎಂದು ತಿಳಿಸಿದ್ದೇವೆ. ಸಿರಿ ಧಾನ್ಯಗಳನ್ನು ಕ್ವಿಂಟಲ್‌ಗಟ್ಟಲೆ ಕೊಳ್ಳುವುದು ಕಡಿಮೆಯಾಗಿದೆ. ಹೀಗಾಗಿ ಹಾಸ್ಟೆಲ್‌ಗಳ ಮೂಲಕ ರೈತರಿಗೆ ಮಾರುಕಟ್ಟೆಯ ವ್ಯವಸ್ಥೆ ಮಾಡಲಾಗುವುದು ಎಂದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಜಿ.ಪಂ ಸಿಇಒ ಜಿ.ಪ್ರಭು ಜಂಟಿ ಕೃಷಿ ನಿರ್ದೇಶಕ ಎನ್‌.ರಮೇಶ್‌ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ಸಿ.ಪಾಪಣ್ಣ ರಾಜ್ಯ ಪ್ರತಿನಿಧಿ ಜಿ.ಕೆ.ಅನಸೂಯ ಕಳಸೇಗೌಡ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.