ತಿಪಟೂರು: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಸುತ್ತಿರುವ ರೈತರ ಹೋರಾಟ ಬೆಂಬಲಿಸಿ ಗಣರಾಜ್ಯೋತ್ಸವದ ದಿನದಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿಗೆ ಹೊರಟಿದ್ದ ಟ್ರ್ಯಾಕ್ಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದರು.
ತಾಲ್ಲೂಕಿನಿಂದ ಸುಮಾರು 50ಕ್ಕೂ ಹೆಚ್ಚಿನ ಟ್ರ್ಯಾಕ್ಟರ್ ಸೇರಿದಂತೆ ನೂರಾರು ರೈತರು ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದರು. ಕಿಬ್ಬನಹಳ್ಳಿಯ ಕೆ.ಬಿ. ಕ್ರಾಸ್ ಬಳಿಯಲ್ಲಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಜಯಲಕ್ಷ್ಮಮ್ಮ ನೇತೃತ್ವದಲ್ಲಿ ಟ್ರ್ಯಾಕ್ಟರ್‌ಗಳನ್ನು ತಡೆದು ಕಿಬ್ಬನಹಳ್ಳಿ ಠಾಣೆಯ ಬಳಿಗೆ ತೆಗೆದುಕೊಂಡು ಹೋದರು. ಈ ಮಧ್ಯೆ ರೈತರು ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ರೈತರು ಕೇಂದ್ರ –ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಮಾತನಾಡಿ, ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲದಂತಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆಯೇ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವುದು ದುರಂತದ ಸಂಗತಿ ಎಂದು ದೂರಿದರು.
ರಾಜ್ಯದ ಮುಖ್ಯಮಂತ್ರಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರೈತರನ್ನೇ ಬೀದಿಗೆ ತರುವಂತಹ ಹುನ್ನಾರಕ್ಕೆ ಮುಂದಾಗಿದ್ದಾರೆ. ಕೃಷಿ ಕಾಯ್ದೆ, ವಿದ್ಯುತ್ ಕಾಯ್ದೆ, ಎಪಿಎಂಸಿ ಕಾಯ್ದೆಗಳು ರೈತ ವಿರೋಧಿಯಾಗಿವೆ. ಅವುಗಳನ್ನು ಅನುಷ್ಠಾನಗೊಳಿಸಲು ಒತ್ತಡ ಹೇರುತ್ತಿರುವುದು ಹೇಯಕೃತ್ಯ ಎಂದು ಟೀಕಿಸಿದರು.
ದೇಶದಾದ್ಯಂತ ರೈತರು ಕಾಯ್ದೆಗಳನ್ನು ವಿರೋಧಿಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ರೈತರ ಮಕ್ಕಳಾಗಿಯೇ ಜನಿಸಿರುವ ಜನಪ್ರತಿನಿಧಿಗಳು ಅಧಿಕಾರದ ಆಸೆಗಾಗಿ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಪೊಲೀಸರನ್ನು ಬಳಸಿಕೊಂಡು ಹೋರಾಟ ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಚಂದನ್ ರಾಜ್ ತಿಮ್ಲಾಪುರ, ತಿಮ್ಮೇಗೌಡ ಗಡಬನಹಳ್ಳಿ, ತಿಮ್ಲಾಪುರ ಗ್ರಾಮದ ನಂಜಾಮರಿ, ಗಂಗಾಧರ್, ದಿನೇಶ್, ಅನುಷ್ ಶಿವಯ್ಯ, ಯೋಗಾನಂದ್, ಉಮಾಶಂಕರ್, ಗೌರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.