ADVERTISEMENT

ಪಿಂಚಣಿ ನೀಡಲು ಹಣವಿಲ್ಲ

ಖಜಾನೆ ಖಾಲಿ: ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ಆರೋಪ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 3:41 IST
Last Updated 16 ಅಕ್ಟೋಬರ್ 2020, 3:41 IST
ಶಿರಾದಲ್ಲಿ ಉಪಚುನಾವಣೆಗಾಗಿ ಕಾಂಗ್ರೆಸ್‌ ಪಕ್ಷದ ಪ್ರಚಾರ ಕಚೇರಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು
ಶಿರಾದಲ್ಲಿ ಉಪಚುನಾವಣೆಗಾಗಿ ಕಾಂಗ್ರೆಸ್‌ ಪಕ್ಷದ ಪ್ರಚಾರ ಕಚೇರಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು   

ಶಿರಾ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಪಿಂಚಣಿ ನೀಡಲು ಸಹ ಹಣವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಕಾಂಗ್ರೆಸ್‌ ಪ್ರಚಾರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಖಜಾನೆ ಸ್ವಂತ ಆಸ್ತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕೊರೊನಾ ಸಂಕಷ್ಟದ ಸಮಯದಲ್ಲಿ ರೈತರು, ಕಾರ್ಮಿಕರು, ಕುಶಲಕರ್ಮಿಗಳು ಸೇರಿದಂತೆ ಯಾರ ನೋವಿಗೂ ಸರ್ಕಾರ ಸ್ವಂದಿಸಲಿಲ್ಲ. ಜನರ ಆರೋಗ್ಯ ಕಾಪಾಡಲು ಸರ್ಕಾರ ವಿಫಲವಾಗಿದೆ ಎಂದು ಅವರು ಟೀಕಿಸಿದರು.

ADVERTISEMENT

ಉಪ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಲು ಹೊರಟಿದೆ. ಆದರೆ, ನಿಗಮಕ್ಕೆ ಒಂದು ಪೈಸೆಯನ್ನೂ ತೆಗೆದಿರಿಸಿಲ್ಲ. ಚುನಾವಣೆ ಸಮಯದಲ್ಲಿ ಬಿಜೆಪಿಯವರಿಗೆ ಇಂತಹ ಯೋಚನೆಗಳು ಬರುತ್ತವೆ ಎಂದು ಶಿವಕುಮಾರ್‌ ಲೇವಡಿ ಮಾಡಿದರು.

ಎರಡೂ ಕ್ಷೇತ್ರಗಳಲ್ಲಿ ಮತದಾರರು ತೋರಿಸುತ್ತಿರುವ ಉತ್ಸಾಹ ಗಮನಿಸಿದರೆ ಚುನಾವಣೆಯ ಫಲಿತಾಂಶ ಹೇಗಿರುತ್ತದೆ ಎಂಬ ಸುಳಿವು ಈಗಾಗಲೇ ಸಿಕ್ಕಿದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಿ.ಬಿ.ಜಯಚಂದ್ರ ಅವರು ₹2,500 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ಮಾಡಿರುವ ಕೆಲಸಗಳು ಜನರ ಕಣ್ಣು ಮುಂದೆ ಇವೆ. ಅಭಿವೃದ್ಧಿಗಾಗಿ ಅವರನ್ನು ಗೆಲ್ಲಿಸಬೇಕು ಎಂದರು.

ಜೆಡಿಎಸ್‌ಗೆ ಬೆಂಬಲ ನೀಡಿದ್ದ ವ್ಯಕ್ತಿಯನ್ನು ಕರೆ ತಂದುಬಿಜೆಪಿ ಟಿಕೆಟ್ ನೀಡಲಾಗಿದೆ. ಅವರಿಗೆ ಸ್ವಂತ ಶಕ್ತಿ ಇದ್ದರೆ ಅವರ ಪಕ್ಷದಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕಿತ್ತು. ಕ್ಷೇತ್ರದ ಜನತೆಗೆ ಈ ಬಗ್ಗೆ ಅರಿವಿಗೆ ಎ‌ಂದರು.

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ, ಮುಖಂಡರಾದ ಬಿ.ಎನ್.ಚಂದ್ರಪ್ಪ, ಮುದ್ದಹನುಮೇಗೌಡ, ಸಾಸಲು ಸತೀಶ್, ಕಲ್ಕೆರೆ ರವಿಕುಮಾರ್, ಸುಧಾಕರ್, ಮುರಳೀಧರ್ ಹಾಲಪ್ಪ, ಬರಗೂರು ನಟರಾಜು, ಪಿ.ಆರ್.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.