ಪಾವಗಡ ತಾಲ್ಲೂಕು ಅರಸೀಕೆರೆಯ ಬಸ್ ನಿಲುಗಡೆ ಮಾಡುವ ರಸ್ತೆ ದೂಳಿನಿಂದ ಕೂಡಿರುವುದು
ಪಾವಗಡ: ತಾಲ್ಲೂಕಿನ ನಿಡಗಲ್ ಹೋಬಳಿಯ ವಾಣಿಜ್ಯ ಕೇಂದ್ರ ಅರಸೀಕೆರೆಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಇಲ್ಲದೆ ಪ್ರಯಾಣಿಕರು ಹೈರಾಣಾಗಿದ್ದಾರೆ.
ಗ್ರಾಮ ಆಂಧ‍್ರಪ್ರದೇಶದ ಅಮರಾಪುರ, ಮಡಕಶಿರಾ, ಶಿರಾ, ಹಿರಿಯೂರು, ಧರ್ಮಪುರ ಸೇರಿದಂತೆ ವಿವಿಧ ಪಟ್ಟಣ, ನಗರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಪ್ರದೇಶವಾಗಿದೆ. ಗ್ರಾಮದಲ್ಲಿರುವ ಅಡಿಕೆ ಮಂಡಿ, ಬ್ಯಾಂಕ್, ವಿವಿಧ ಕೆಲಸ ಕಾರ್ಯಗಳಿಗಾಗಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಹೋಗುತ್ತಾರೆ.
50ಕ್ಕೂ ಹೆಚ್ಚು ಸರ್ಕಾರಿ, ಖಾಸಗಿ ಬಸ್‌ಗಳು ಗ್ರಾಮದ ಮೂಲಕ ಸಂಚರಿಸುತ್ತವೆ. ಲಾರಿ, ಬೃಹತ್ ವಾಹನಗಳು ಸಹ ಇದೇ ಮಾರ್ಗದಲ್ಲಿ ಸಾಗುತ್ತವೆ. ಬೆಳಗಿನ ಜಾವದಿಂದ ರಾತ್ರಿವರೆಗೆ ಬಸ್‌ಗಳಿಗಾಗಿ ನೂರಾರು ಪ್ರಯಾಣಿಕರು ಕಾದು ಕುಳಿತಿರುತ್ತಾರೆ. ಬಸ್ ನಿಲ್ದಾಣ, ತಂಗುದಾಣ ಇಲ್ಲದ ಕಾರಣ ಬಿಸಿಲು, ಮಳೆಯಲ್ಲಿಯೇ ಗಂಟೆಗಟ್ಟಲೆ ಕಾದು ಹೈರಾಣಾಗುತ್ತಿದ್ದಾರೆ.
ಪ್ರಯಾಣಿಕರು ಬಿಸಿಲಿನಲ್ಲಿ ಅಥವಾ ಮರದ ಬುಡದಲ್ಲಿ ನಿಲ್ಲಬೇಕು. ಮಳೆಗಾಲದಲ್ಲಿ ಲಗೇಜ್ ಜತೆ ಪ್ರಯಾಣಿಸುವವರು, ಮಕ್ಕಳನ್ನು ಕರೆದುಕೊಂಡು ಹೋಗುವವರು, ವೃದ್ಧರು ಹೆಚ್ಚು ಸಂಕಷ್ಟ ಅನುಭವಿಸುತ್ತಾರೆ. ಬಸ್ ನಿಲ್ದಾಣಗಳಲ್ಲಿ ಅಗತ್ಯ ಮಾಹಿತಿ ಇಲ್ಲದೆ ತಾವು ಇಳಿಯಬೇಕಾದ ಸ್ಥಳ, ತಾವು ಎಲ್ಲಿದ್ದೇವೆ ಎಂಬುದರ ಮಾಹಿತಿ ಸಿಗುತ್ತಿಲ್ಲ.
2014ರಲ್ಲಿ ಶಿಥಿಲವಾಗಿದ್ದ ತಂಗುದಾಣವನ್ನು ತೆರವುಗೊಳಿಸಲಾಗಿದೆ. ಆದರೆ ಅದಕ್ಕೆ ಬದಲಾಗಿ ವರ್ಷ ಕಳೆದರೂ ಪ್ರಯಾಣಿಕರು ಕುಳಿತುಕೊಳ್ಳಲು ತಂಗುದಾಣವನ್ನು ಈವರೆಗೆ ನಿರ್ಮಿಸಿಲ್ಲ. ಪ್ರಯಾಣಿಕರು, ಸಾರ್ವಜನಿಕರು ತಂಗುದಾಣ ನಿರ್ಮಿಸುವಂತೆ ಹಲ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಗ್ರಾಮದ ಲಿಂಗದಹಳ್ಳಿ, ಪಟ್ಟಣ, ಶಿರಾ ರಸ್ತೆಗೆ ಸಂಪರ್ಕ ಕಲ್ಪಿಸುವ ವೃತ್ತದ ಮೂಲಕವೇ ಬೃಹತ್ ವಾಹನಗಳೂ ಸಂಚರಿಸುತ್ತವೆ. ಇದೇ ಸ್ಥಳದಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತದೆ. ಬಸ್ ನಿಲುಗಡೆ ಮಾಡುವ ಕಿರಿದಾದ ರಸ್ತೆಯ ಮೂಲಕವೇ ಬೃಹತ್ ವಾಹನಗಳೂ ಸಂಚರಿಸುವುದರಿಂದ ಅಂಗೈಯಲ್ಲಿ ಜೀವ ಹಿಡಿದು ಭಯದಲ್ಲಿ ಪ್ರಯಾಣಿಕರು ಇಳಿಯಬೇಕಿದೆ.
ಕುಡಿಯುವ ನೀರಿನ ವ್ಯವಸ್ಥೆ ಇಲ್ಲ: ಪ್ರಯಾಣಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಬಸ್ ನಿಲುಗಡೆ ಮಾಡುವ ಸ್ಥಳದಲ್ಲಿರುವ ಅಂಗಡಿ ಮಳಿಗೆಗಳ ಮಾಲೀಕರಿಂದ ನೀರು ಪಡೆದು ಕುಡಿಯುವ ಸ್ಥಿತಿ ಇದೆ.
ದೂಳು ಮಯ: ಡಾಂಬರ್ ಕಿತ್ತು ಹೋಗಿ ಮಣ್ಣಿನಿಂದ ಕೂಡಿರುವ ಕಾರಣ ರಸ್ತೆಯ ಪಕ್ಕದಲ್ಲಿ ನಿಲ್ಲುವ ಪ್ರಯಾಣಿಕರ ಬಟ್ಟೆ, ವಸ್ತುಗಳು ಕೆಲವೇ ನಿಮಿಷಗಳಲ್ಲಿ ದೂಳಿನಿಂದ ತುಂಬಿರುತ್ತವೆ. ಸಾರ್ವಜನಿಕರು ದೂಳು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಮಂಗಳವಾರ ಸಂತೆ: ಗ್ರಾಮದಲ್ಲಿ ಪ್ರತಿ ಮಂಗಳವಾರ ಸಂತೆ ನಡೆಯುತ್ತದೆ. ಸಂತೆ ದಿನ ಪ್ರಯಾಣಿಕರ ಗೋಳು ಹೇಳತೀರದು. ರೈತರು, ತರಕಾರಿ, ಇತರೆ ಸರಕು ಸರಂಜಾಮುಗಳ ವ್ಯಾಪಾರಿಗಳೂ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ.
ಸ್ಥಳವಿದ್ದರೂ ನಿರ್ಮಾಣವಾಗದ ತಂಗುದಾಣ: ತಂಗುದಾಣ ಅಥವಾ ಬಸ್ ನಿಲ್ದಾಣ ನಿರ್ಮಿಸಲು ಸಾಕಷ್ಟು ಸ್ಥಳವಿದೆ. ಆದರೆ ಇಲ್ಲಿನ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ತಂಗುದಾಣ ನಿರ್ಮಿಸಲಾಗಿಲ್ಲ ಎಂಬ ಆರೋಪ ಕೇಳಿಬರುತ್ತಿವೆ.
ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಗ್ರಾಮದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕು. ಅಲ್ಲಿಯವರೆಗೆ ಕನಿಷ್ಠ ತಂಗುದಾಣವನ್ನಾದರೂ ನಿರ್ಮಿಸಿ ಗ್ರಾಮಸ್ಥರು, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯಿಸಿದರು.
ಪ್ರಯಾಣಿಕರು ಗಂಟೆಗಟ್ಟಲೆ ಬಿಸಿಲು ಮಳೆಯಲ್ಲಿಯೇ ಕಾಯಬೇಕಿದೆ. ಹೀಗಾಗಿ ತುರ್ತಾಗಿ ತಂಗುದಾಣ ನಿರ್ಮಿಸಬೇಕುಎ.ಸಿ ಮಂಜುನಾಥ ಅರಸೀಕೆರೆ
ರಸ್ತೆಯಲ್ಲಿಯೇ ಬಸ್ ನಿಲುಗಡೆ ಮಾಡುವುದರಿಂದ ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣಿಕರು ಬಸ್ ಹತ್ತಿ ಇಳಿಯಬೇಕು. ಹೀಗಾಗಿ ಬಸ್ ನಿಲುಗಡೆಗಾಗಿ ಪ್ರತ್ಯೇಕ ಸ್ಥಳ ಮೀಸಲಿರಿಸಿ ಪ್ರಯಾಣಿಕರ ಜೀವ ಕಾಪಾಡಬೇಕುಸಿ.ಬಸವರಾಜು ಅರಸೀಕೆರೆ
ಬಸ್ ನಿಲುಗಡೆ ಮಾಡುವ ಪ್ರದೇಶದಲ್ಲಿ ಡಾಂಬರು ಹಾಕಿಸಿ ದೂಳು ಬರದಂತೆ ವ್ಯವಸ್ಥೆ ಮಾಡಬೇಕು. ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕುನರಸಿಂಹಮೂರ್ತಿ ಅರಸೀಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.