ADVERTISEMENT

ಕೊರಟಗೆರೆ ತಾಲ್ಲೂಕಿನ ಬಜ್ಜನಹಳ್ಳಿ: ಈ ಸರ್ಕಾರಿ ಶಾಲೆಯ ಕೊಠಡಿಗೆ ಚಾವಣಿಯೇ ಇಲ್ಲ

ಕೊರಟಗೆರೆ ತಾಲ್ಲೂಕಿನ ಬಜ್ಜನಹಳ್ಳಿ ಶಾಲೆಯ ಸಮಸ್ಯೆ; ಒಂದರಿಂದ ಐದನೇ ತರಗತಿ ಓದುವ 38 ವಿದ್ಯಾರ್ಥಿಗಳಿಗೆ ಎರಡೇ ಕೊಠಡಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2018, 19:04 IST
Last Updated 26 ಜುಲೈ 2018, 19:04 IST
ಕೊರಟಗೆರೆ ತಾಲ್ಲೂಕಿನ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜ್ಜನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಸದ್ಯದ ಸ್ಥಿತಿ
ಕೊರಟಗೆರೆ ತಾಲ್ಲೂಕಿನ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜ್ಜನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಸದ್ಯದ ಸ್ಥಿತಿ   

ಕೊರಟಗೆರೆ:ತಾಲ್ಲೂಕಿನ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬಜ್ಜನಹಳ್ಳಿ ಸರ್ಕಾರಿ ಪ್ರಾಥಮಿಕಶಾಲೆಯ ಮಕ್ಕಳು ಚಾವಣಿ ಇಲ್ಲದ ಪಾಳು ಬಿದ್ದ ಕೊಠಡಿಯಲ್ಲೆ ಇಂದಿಗೂ ಪಾಠ ಕಲಿಯುತ್ತಿದ್ದಾರೆ.

ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ಓದುವ ಒಟ್ಟು 38 ವಿದ್ಯಾರ್ಥಿಗಳಿದ್ದಾರೆ. ಇಬ್ಬರು ಶಿಕ್ಷಕರಿದ್ದಾರೆ. ಎರಡು ಬೋಧನಾ ಕೊಠಡಿಗಳಿವೆ. ಅದರಲ್ಲೊಂದು ಕೊಠಡಿಯ ಚಾವಣಿ ಕುಸಿದು ಬಿದ್ದಿದೆ. ಇನ್ನೊಂದು ಕೊಠಡಿ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ.

ಮಳೆ ಬಂದರೆ ಶಾಲಾ ಮಕ್ಕಳು ನೆನೆಯಬೇಕು, ಬಿಸಿಲು ಬಂದರೆ ಬೇಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಯೋಚಿಸುವಂತಾಗಿದೆ.

ADVERTISEMENT

ಶಾಲೆ ಕಟ್ಟಡ ದುರಸ್ತಿಗೆ ಗ್ರಾಮಸ್ಥರು, ಶಾಲಾ ಅಭಿವೃದ್ಧಿ ಮಂಡಳಿಯವರು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಸಮೀಪದ ಬೋಡಬಂಡೇನಹಳ್ಳಿ ಶಾಲೆಯೂ ಇದೇ ಪರಿಸ್ಥಿತಿಯಲ್ಲಿದೆ. ಈ ಬಗ್ಗೆ ಇಲಾಖೆ ಗಮನ ಹರಿಸಬೇಕಿದೆ.

ಇದೇ ಗ್ರಾಮದ ಸಮೀಪಲ್ಲೆ ಏಕಲವ್ಯ ವಸತಿ ಶಾಲೆ ಇದೆ. ಸನಿಹದಲ್ಲೆ ಈಚೆಗೆ ಪೊಲೀಸ್ ತರಬೇತಿ ಕೇಂದ್ರದ ಶಂಕುಸ್ಥಾಪನೆಯೂ ನೆರವೇರಿದೆ. ಆದರೆ, ಗ್ರಾಮದ ಪ್ರಾಥಮಿಕ ಶಾಲೆಯ ಸ್ಥಿತಿ ಮಾತ್ರ ಹೀನಾಯ ಸ್ಥಿತಿ ತಲುಪಿದೆ.

**

ತಾಲ್ಲೂಕಿನಲ್ಲಿ 128 ಹಳೇ ಕಟ್ಟಡಗಳ ದುರಸ್ತಿಗೆ ಸರ್ಕಾರಕ್ಕೆ ಎರಡು ಬಾರಿ ಪ್ರಸ್ತಾವ ಸಲ್ಲಿಸಲಾಗಿದೆ. ಇಲ್ಲಿವರೆಗೆ ಸರ್ಕಾರ ಅನುದಾನ ಮಂಜೂರು ಮಾಡಿಲ್ಲ.

-ಎಚ್.ಎಸ್.ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ, ಕೊರಟಗೆರೆ

**

ಶಾಲಾ ಕೊಠಡಿ ಬಿದ್ದು ನಾಲ್ಕೈದು ವರ್ಷಗಳೇ ಕಳೆದಿವೆ. ಮಳೆ, ಬಿಸಿಲಿನಲ್ಲೆ ನಮ್ಮ ಮಕ್ಕಳು ವಿದ್ಯಾಭ್ಯಾಸ ಕಲಿಯುವ ಪರಿಸ್ಥಿತಿ ಇದೆ.
-ಶಿವರಾಜು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ

**

ಮಳೆಯಿಂದ ಕೆಲವು ಶಾಲಾ ಕಟ್ಟಡಗಳಿಗೆ ಹಾನಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ದುರಸ್ತಿಗೆ ಅನುದಾನ ಬಿಡುಗಡೆ ಮಾಡಲಾಗುವುದು.

-ಶಾಲಿನಿ ರಜನೀಶ್‌, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.