ADVERTISEMENT

ಕಲ್ಪೋತ್ಸವಕ್ಕೆ ಅದ್ದೂರಿ ತೆರೆ

ನಟಿ ಉಮಾಶ್ರೀಗೆ ಕಲ್ಪತರು ರತ್ನ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 6:53 IST
Last Updated 23 ನವೆಂಬರ್ 2025, 6:53 IST
ಕಲ್ಪೋತ್ಸವ ಕಾರ್ಯಕ್ರಮದಲ್ಲಿ ನಟಿ ಉಮಾಶ್ರೀ ಅವರಿಗೆ ‘ಕಲ್ಪತರು ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಕಲ್ಪೋತ್ಸವ ಕಾರ್ಯಕ್ರಮದಲ್ಲಿ ನಟಿ ಉಮಾಶ್ರೀ ಅವರಿಗೆ ‘ಕಲ್ಪತರು ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ತಿಪಟೂರು: ನಗರದ ಕಲ್ಪತರು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ಕಲಾಕೃತಿ ಸಂಸ್ಥೆಯ ಸಹಯೋಗದಲ್ಲಿ ಮೂರು ದಿನ ಆಯೋಜನೆಗೊಂಡಿದ್ದ ಕಲ್ಪೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ತೆರೆಗೊಂಡು ಸಮಾರೋಪ ಸಮಾರಂಭದಲ್ಲಿ ನಟಿ ಉಮಾಶ್ರೀ ಅವರಿಗೆ 2025ನೇ ಸಾಲಿನ ‘ಕಲ್ಪತರು ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೂರು ದಿನದ ಕಾರ್ಯಕ್ರಮದಲ್ಲಿ ಮಕ್ಕಳ ಸೃಜನಶೀಲತೆಯನ್ನು ಉತ್ತೇಜಿಸುವ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ, ಶಾಲಾ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ, ಕಲಾವಿದರಿಗೆ ರಂಗಗೀತೆ, ಭಾವಗೀತೆ, ನಾಟಕ, ಹಿರಿಯ ನಾಗರೀಕರಿಗಾಗಿ ಪ್ರತ್ಯೇಕ ಕ್ರೀಡಾಕೂಟ, ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಕ್ರಿಕೆಟ್ ಪಂದ್ಯಾವಳಿ, ತೆಂಗು ಹಾಗೂ ವಸ್ತು ಪ್ರದರ್ಶನ, ಹಳ್ಳಿಗಾರ್ ಎತ್ತುಗಳ ಆಕರ್ಷಣೆ, ಸಾಕು ಪ್ರಾಣಿಗಳ ಪ್ರದರ್ಶನ, ಉಚಿತ ಆರೋಗ್ಯ ಶಿಬಿರ, ಕಲಾತಂಡಗಳ ಪ್ರದರ್ಶನ, ಅಂಬಾರಿ ಉತ್ಸವ, ಸರಿಗಮ ತಂಡ, ರಾಜೇಶ್ ಕೃಷ್ಣನ್, ಅನುಶ್ರೀ, ಕಾಮಿಡಿ ತಂಡಗಳಿಂದ ಮನರಂಜನಾ ಕಾರ್ಯಕ್ರಮ ಜರುಗಿದವು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉಮಾಶ್ರೀ, ‘ರಂಗಭೂಮಿ, ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ ನನಗೆ ರಾಜಕಾರಣದ ಮೂಲಕ ಜನಸೇವೆ ಮಾಡುವ ಅವಕಾಶ ದೊರೆತಿದೆ. ಕನ್ನಡ ಜನರ ಅಭಿಮಾನದಿಂದ ನಾಡಿನ ಎಲ್ಲರ ಮನೆಗೆ ತಲುಪಿದ್ದೇನೆ. ಮಹಿಳೆಯರು ಕೇವಲ ಧಾರಾವಾಹಿಗಳನ್ನು ಅಷ್ಟೇ ಅಲ್ಲದೆ ನಾಟಕಗಳನ್ನು ಹೆಚ್ಚಾಗಿ ನೋಡುವುದನ್ನು ರೂಢಿಸಿಕೊಳ್ಳಬೇಕು. ಹುಟ್ಟೂರಿನ ಜನ ನನಗೆ ನೀಡಿರುವ ಈ ಪ್ರಶಸ್ತಿ ನನ್ನ ಪಾಲಿಗೆ ಬಹಳ ಮಹತ್ವದಾಗಿದೆ’ ಎಂದರು.

ADVERTISEMENT

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ತಿಪಟೂರು ಶೈಕ್ಷಣಿಕವಾಗಿ ಹಾಗೂ ಕಲೆಯಲ್ಲಿ ಮುಂದುವರಿದಿರುವ ತಾಲ್ಲೂಕು ಕೇಂದ್ರ. ಜಿಲ್ಲೆಯಾಗುವ ಎಲ್ಲಾ ಲಕ್ಷಣಗಳನ್ನು ಒಳಗೊಂಡಿದೆ. ತಿಪಟೂರು ಅನೇಕ ಕಲಾವಿದರಾಗಿ ಜನ್ಮ ನೀಡಿರುವ ಸ್ಥಳವಾಗಿದ್ದು ಇಲ್ಲಿನ ಜನ ಕಲೆಯನ್ನು ಎಷ್ಟು ಅಪಾರವಾಗಿ ಪ್ರೀತಿಸುತ್ತಾರೆ ಎಂದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ, ರಾಜಕಾರಣದಲ್ಲಿ ಯಾರೂ ಶಾಶ್ವತವಲ್ಲ. ಇಂದು ಇರುವವರು ನಾಳೆ ಬದಲಾಗಬಹುದು ಆದರೆ, ಕಲ್ಪೋತ್ಸವವು ಪ್ರತಿ ವರ್ಷವೂ ನಡೆಯಬೇಕು. ತಿಪಟೂರು ನಗರಸಭೆಗೆ ಹೊಸದಾಗಿ 15 ಗ್ರಾಮಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರಕ್ಕೆ 24 ಗಂಟೆಯೂ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗೆ ಬೇಕಾದ ಪೂರ್ವಭಾವಿ ಕಾರ್ಯ ನಡೆಯುತ್ತಿವೆ ಎಂದರು.

ಕಲಾಕೃತಿ ಅಧ್ಯಕ್ಷ ಡಾ.ಶ್ರೀಧರ್ ಮಾತನಾಡಿ, ತಿಪಟೂರಿನ ಸಾಂಸ್ಕೃತಿಕ ಹಿರಿಮೆಯನ್ನು ನಾವೆಲ್ಲರೂ ಒಗ್ಗೂಡಿ ಪೋಷಿಸಬೇಕು. ಮುಂಬರುವ ದಿನಗಳಲ್ಲಿ ತಿಪಟೂರನ್ನು ಜಿಲ್ಲಾ ಕೇಂದ್ರವಾಗಿಸಲು ಡಾ.ಜಿ.ಪರಮೇಶ್ವರ್ ಆಸಕ್ತಿ ವಹಿಸಬೇಕು ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಲಾಯಿತು. ಕೆರೆಗೋಡಿ ರಂಗಾಪುರ ಮಠದ ಗುರುಪರದೇಶಿಕೇಂದ್ರ ಸ್ವಾಮೀಜಿ, ಗುರುಕಲ ಮಠದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ, ಕಾಡಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ, ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ, ದಸರಿಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಯುವ ಸಬಲೀಕರಣ ಆಯುಕ್ತ ಚೇತನ್, ಜಿಲ್ಲಾ ಕಾಂಗ್ರೆಸ್ ಯುವ ಅಧ್ಯಕ್ಷ ನಿಖಿಲ್‌ರಾಜಣ್ಣ, ಮುರಳೀಧರ್ ಹಾಲಪ್ಪ, ಅಶೋಕ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.