
ತಿಪಟೂರು: ನಗರವನ್ನು ಹಾಸನ, ಅರಸೀಕೆರೆ, ಬೆಂಗಳೂರು, ಹುಳಿಯಾರು ಹಾಗೂ ತುರುವೇಕೆರೆ ಕಡೆಯಿಂದ ಪ್ರವೇಶಿಸಬಹುದು. ಆದರೆ ಈ ಎಲ್ಲ ಮಾರ್ಗದ ರಸ್ತೆಗಳ ಸ್ಥಿತಿ ದುಸ್ತರವಾಗಿದೆ.
ಹಾಲ್ಕುರಿಕೆ ರಸ್ತೆಯ ಗೋವಿನಪುರ, ಅಣ್ಣಾಪುರದ ಅಸುಪಾಸಿನಲ್ಲಿ ಮಾರು ಉದ್ದದ ಗುಂಡಿಗಳು ನಗರಕ್ಕೆ ಬರುವವರನ್ನು ಸ್ವಾಗತಿಸುತ್ತದೆ. ತುರುವೇಕೆರೆ ದಿಕ್ಕಿನಿಂದ ಬರುವ ವಾಹನಗಳಿಗೆ ರೈಲ್ವೆ ಮಾರ್ಗದ ಹತ್ತಿರ ಗುಂಡಿಗಳ ಸಾಲು ಎದುರಾಗುತ್ತದೆ. ಮಳೆ ಬಂದರೆ ಅಲ್ಲಿ ನೀರು ನಿಂತು ರಸ್ತೆ ಸಂಪೂರ್ಣ ಮುಚ್ಚಿ ಹೋಗುತ್ತದೆ.
ಬೆಂಗಳೂರು ಕಡೆಯಿಂದ ಬರುವಾಗ ಕೋಡಿ ವೃತ್ತದಿಂದಲೇ ರಸ್ತೆ ಸುಸಜ್ಜಿತವಾಗಿಲ್ಲ. ಯುಜಿಡಿ ನೀರು ಮಳೆ ನೀರಿನ ಜೊತೆ ಕಲೆತು ರಸ್ತೆ ಮೇಲೆ ಹರಿದು ದುರ್ವಾಸನೆ ಬೀರುತ್ತಿದೆ. ಚಿಂದನೇಹಳ್ಳಿ ಗಡಿಯಿಂದ ತಿಪಟೂರು ಹಾಸನ ರಸ್ತೆಯಲ್ಲಿ ಆಳವಾದ ಗುಂಡಿಗಳಿದ್ದು, ಹಲವು ಅಪಘಾತ ನಡೆದ ನಿದರ್ಶನಗಳಿವೆ.
ನಗರದಲ್ಲಿ ಪ್ರತಿನಿತ್ಯ ಆಯುಕ್ತರು ಹಾಗೂ ಅಧಿಕಾರಿಗಳು ಸಂಚಾರ ಮಾಡುತ್ತಿದ್ದರೂ, ನಗರಸಭೆ ಮುಂಭಾಗದ ರೈಲ್ವೆ ರಸ್ತೆ, ಉಪನೋಂದಣಾಧಿಕಾರಿ ಕಚೇರಿ ರಸ್ತೆ, ಕೋರ್ಟ್ ಹಿಂಭಾಗದ ರಸ್ತೆ, ಸರ್ಕಾರಿ ಬಸ್ ನಿಲ್ದಾಣ ಪ್ರವೇಶ ರಸ್ತೆ, ಗಾಂಧಿನಗರ ರಸ್ತೆ ಹಾಗೂ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಹೋಗುವ ಮಾರ್ಗಗಳಲ್ಲಿ ಡಾಂಬರೀಕರಣ ಕನಸಾಗಿಯೇ ಉಳಿದಿದೆ.
ಈ ವಿಚಾರದಲ್ಲಿ ನಗರಸಭೆ, ಜಿಲ್ಲಾ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆ ಪರಸ್ಪರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ದೂರುತ್ತಾರೆ ಸ್ಥಳೀಯರು.
ಗ್ರಾಮಾಂತರ ಪ್ರದೇಶದಲ್ಲಿ ಬೋಚಿಹಳ್ಳಿ ಮತ್ತಿಘಟ್ಟ ಜಿಲ್ಲಾ ರಸ್ತೆ, ಬಳವನೇರಲು ಹೊಸೂರು ರಸ್ತೆ, ವಿಘ್ನಸಂತೆ ಗ್ರಾಮ, ಹಾಲ್ಕುರಿಕೆ ಬೈರಾಪುರ ರಸ್ತೆ, ಹಾಲೇನಹಳ್ಳಿಯ ತಿರುವುಗಳಲ್ಲಿ ಆಳವಾದ ಗುಂಡಿಗಳಾಗಿವೆ. ಬೊಮ್ಮಾಲಾಪುರ, ನಾಗತೀಹಳ್ಳಿ- ಮುಖ್ಯರಸ್ತೆ, ಮಾರಗೊಂಡನಹಳ್ಳಿ ಬಿದರೆಗುಡಿ, ಕರೀಕೆರೆ ಕೊನೇಹಳ್ಳಿ ಸಂಪರ್ಕ ರಸ್ತೆ, ಬಿಳಿಗೆರೆ ಪಾಳ್ಯ ಕಿಬ್ಬನಹಳ್ಳಿ, ಕಲ್ಲುಶೆಟ್ಟಿಹಳ್ಳಿ ಕೊಂಡ್ಲಿಘಟ್ಟ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಅಪಾಯಕ್ಕೆ ಆಹ್ವಾನಿಸುವಂತಿದೆ.
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿ 605 ರಸ್ತೆಗಳಿದ್ದು 1,001 ಕೀ.ಮೀ ರಸ್ತೆ ಉದ್ದವಿದೆ. ಈಗಾಗಲೇ 53 ರಸ್ತೆಗಳು ಟೆಂಡರ್ ಆಗಿದ್ದು, ಗ್ರಾಮೀಣ ಭಾಗದ ಎಲ್ಲ ರಸ್ತೆಗಳ ಡಾಂಬರೀಕರಣಕ್ಕೆ ₹20 ಕೋಟಿ ಅನುದಾನ ಬೇಕಾಗುತ್ತದೆ ಎಂದು ಎಂಜಿನಿಯರ್ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಬೆಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ರಾಜ್ಯ ಹೆದ್ದಾರಿ ಸೇರಿದಂತೆ ಮಂಡ್ಯ-ಹಡಗಲಿ, ತಿಪಟೂರು-ಹಾಸನ, ಚಿ.ನಾ. ಹಳ್ಳಿ- ತಿಪಟೂರು, ನೊಣವಿನಕೆರೆ-ಹೆಡಗರಹಳ್ಳಿ, ಹುಣಸೇಘಟ್ಟ-ದಸರೀಘಟ್ಟ ಕ್ರಾಸ್ ರಸ್ತೆ ಒಟ್ಟು 96.96 ಕಿ.ಮೀ ಹಾದು ಹೋಗಿದೆ. ಜಿಲ್ಲಾ ಮುಖ್ಯ ರಸ್ತೆ 304 ಕಿ.ಮೀ ಉದ್ದವಿದೆ ಎಂದು ಲೊಕೋಪಯೋಗಿ ಇಲಾಖೆ ಮಾಹಿತಿ ನೀಡಿದೆ. ನಗರಸಭೆ ವ್ಯಾಪ್ತಿಯಲ್ಲಿ 124 ಕಿ.ಮೀ ಉದ್ದದ ರಸ್ತೆ ಮಾರ್ಗವಿದೆ.
ನಾಗರಿಕತೆ ಬೆಳೆದಂತೆ ರಸ್ತೆಗಳ ಗುಣಮಟ್ಟ ಉತ್ತಮವಾಗಬೇಕು. ಆದರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಾರುದ್ದದ ಗುಂಡಿಗಳು ಸವಾರರನ್ನು ದಿಗ್ಭ್ರಾಂತಗೊಳಿಸುತ್ತಿವೆ. ಇದರಲ್ಲಿ ಜನರ ಜವಾಬ್ದಾರಿಯೂ ಇದೆ. ರಸ್ತೆ ಕಾಮಗಾರಿ ನಡೆಯುವಾಗ ಅಧಿಕಾರಿಗಳೊಂದಿಗೆ ಜನರು ಸಹ ಗುಣಮಟ್ಟ ಪರಿಶೀಲಿಸಬೇಕು.ಅನುಷ್ ಶಿವಯ್ಯ ಶಾಸಕರು
ತಿಪಟೂರು ಮಹಿಳಾ ಕ್ಷೇತ್ರ ಆಗುತ್ತದೆ ಎಂಬ ಉದಾಸೀನತೆಯಿಂದ ಎರಡು ವರ್ಷಗಳಿಂದ ರಸ್ತೆ ಕಾಮಗಾರಿಯನ್ನು ಮರೆತು ಹೋಗಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ. ದಿಲೀಪ್ ಸೂಗೂರು ಬಿಜೆಪಿ ಮುಖಂಡ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅನೇಕ ರಸ್ತೆಗಳು ಜಲ್ಲಿ ಮತ್ತು ಡಾಂಬರು ಕಂಡಿಲ್ಲ. ಗುಂಡಿಮಯವಾಗಿದ್ದು ವಾಹನ ಸವಾರರು ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆ ಕಾಮಗಾರಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿದ್ದರೂ ಕೆಲಸದ ಗುಣಮಟ್ಟ ಹಾಗೂ ಮೇಲ್ವಿಚಾರಣೆ ಕೊರತೆಯಿಂದ ಶಾಶ್ವತ ಪರಿಹಾರ ದೊರೆಯುತ್ತಿಲ್ಲ.ರೇಣು ಡಿ.ಸಿ. ನಗರ ನಿವಾಸಿ
ರಸ್ತೆ ಗುಂಡಿಗಳಿಗೆ ಶಾಶ್ವತ ಪರಿಹಾರ ನೀಡಲು ತಕ್ಷಣ ದುರಸ್ತಿ ಪ್ರಾರಂಭಿಸಿ. ಪ್ರತಿ ಇಲಾಖೆಯೂ ತನ್ನ ವ್ಯಾಪ್ತಿಯ ರಸ್ತೆಗಳ ಜವಾಬ್ದಾರಿ ಹೊತ್ತುಕೊಳ್ಳಬೇಕು. ಇಲ್ಲದಿದ್ದರೆ ಗುಂಡಿ ಅಭಿಯಾನ ಮಾಡಬೇಕಾಗುತ್ತದೆ.ಸುದರ್ಶನ್ ಜೆಡಿಎಸ್ ನಗರಾಧ್ಯಕ್ಷ
ಪ್ರತಿ ವರ್ಷ ರಸ್ತೆ ಕಾಮಗಾರಿಗೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಆದರೆ ಕೆಲವೇ ತಿಂಗಳಲ್ಲಿ ರಸ್ತೆ ಮತ್ತೆ ಕುಸಿಯುತ್ತದೆ. ಕೆಲಸದ ಗುಣಮಟ್ಟದ ಮೇಲಿನ ನಿಗಾ ಕೊರತೆ ಇದೆ. ಸ್ಥಳೀಯ ಸಂಸ್ಥೆಗಳು ರಸ್ತೆ ಕಾಮಗಾರಿಗಳನ್ನು ಗುಣಮಟ್ಟದ ನಿಯಮಾವಳಿಗಳ ಪ್ರಕಾರ ನಿರ್ವಹಿಸಬೇಕು. ಮಳೆಗಾಲದ ಮೊದಲು ದುರಸ್ತಿ ಕೈಗೊಳ್ಳಬೇಕು. ಸಾರ್ವಜನಿಕರಿಂದ ದೂರು ಸ್ವೀಕರಿಸಲು ಆನ್‌ಲೈನ್ ವ್ಯವಸ್ಥೆ ಅಥವಾ ನೇರ ಸಂಪರ್ಕ ಕಚೇರಿ ಸ್ಥಾಪಿಸಬೇಕು.ಚಂದ್ರಶೇಖರ್ ಬಿಳಿಗೆರೆ
ರಸ್ತೆಗಳಲ್ಲಿ ಅಪಘಾತಗಳು ಸಂಭವಿಸಿದಾಗ ಚಾಲಕರು ವಾಹನಗಳ ಮೇಲೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಾರೆ. ಸಂಬಂಧಪಟ್ಟ ರಸ್ತೆಗಳ ಇಲಾಖೆಗಳನ್ನು ಗುರುತಿಸಿ ದೂರು ದಾಖಲಿಸಿದಾಗ ಇಲಾಖೆಯವರು ಎಚ್ಚೆತ್ತು ಕಾರ್ಯಪ್ರವೃತ್ತರಾಗುತ್ತಾರೆ.ಲತಾ ಸುಂದರ್ ಗೃಹಿಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.