
ತಿಪಟೂರು: ನಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯ ನಗರ ಹಾಗೂ ಹೊನ್ನವಳ್ಳಿ ಪೊಲೀಸ್ ಠಾಣೆಯಿಂದ ಅಪರಾಧ ತಡೆ ಮಾಸಾಚರಣೆ ಹಾಗೂ ನಶೆಮುಕ್ತ ಅಭಿಯಾನ ಮಂಗಳವಾರ ನಡೆಯಿತು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ನಗರದ ಸಿಂಗ್ರಿ ನಂಜಪ್ಪ ವೃತ್ತದವರೆಗೆ ವಿದ್ಯಾರ್ಥಿಗಳಿಂದ ಅರಿವು ಜಾಥಾ ನಡೆಯಿತು.
ಪೊಲೀಸ್ ಡಿವೈಎಸ್‌ಪಿ ಜಯಲಕ್ಷ್ಮಮ್ಮ ಮಾತನಾಡಿ, ಯುವಜನತೆ ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಮಾದಕ ವಸ್ತುಗಳಾದ ಗಾಂಜಾ, ಹೆರಾಯಿನ್, ಕೊಕೈನ್, ಕೊಡಾಯಿನ್ ಮುಂತಾದ ಸೇವನೆಯ ದುಶ್ಚಟಕ್ಕೆ ದಾಸರಾಗುವುದರಿಂದ ಮಾನಸಿಕ ಹಾಗೂ ದೈಹಿಕ ಆನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಾಂಶುಪಾಲ ಎಂ.ಡಿ.ಶಿವಕುಮಾರ್ ಮಾತನಾಡಿ, ಮನಸ್ಸು ಹಾಗೂ ದೇಹದ ಸಹಜ ಕ್ರಿಯೆಗಳನ್ನು ಬದಲಾಯಿಸುವ ಮಾದಕ ವಸ್ತುಗಳು ಯುವ ಜನರಲ್ಲಿ ಆಗಾಧ ದುಷ್ಪರಿಣಾಮ ಬೀರುತ್ತವೆ. ಮಾದಕ ವಸ್ತು ಮಾರಾಟ, ಸಾಗಣೆ ಹಾಗೂ ಸೇವನೆ ಕಂಡುಬಂದಲ್ಲಿ ವಿದ್ಯಾರ್ಥಿಗಳು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಹೊನ್ನವಳ್ಳಿ ಪೋಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ರಾಜೇಶ್, ಕಿಬ್ಬನಹಳ್ಳಿ ಠಾಣೆಯ ನಾಗರಾಜು, ನೊಣವಿನಕೆರೆಯ ಶಮೀಮ, ನಗರ ಠಾಣೆಯ ಯತೀಶ್, ದೈಹಿಕ ಉಪನ್ಯಾಸಕರಾದ ಚಂದ್ರಶೇಖರ್, ಶಿಕ್ಷಕರಾದ ಭವಾನಿ, ಷಡಕ್ಷರಿ, ಅಭಿಷೇಕ್, ಪ್ರಶಾಂತ್, ಸೋಮಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.