ADVERTISEMENT

‘ಐಟಿ ದಾಳಿ ರಾಜಕೀಯ ಪ್ರೇರಿತ’: ತಾಲ್ಲೂಕು ಬ್ಲಾಕ್ ಕಾಂಗ್ರೆಸ್‌ನಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 15:42 IST
Last Updated 13 ಅಕ್ಟೋಬರ್ 2019, 15:42 IST
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಘಟಕ, ತಾಲ್ಲೂಕು ಛಲವಾದಿ ಮಹಾಸಭಾ ಹಾಗೂ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಘಟಕ, ತಾಲ್ಲೂಕು ಛಲವಾದಿ ಮಹಾಸಭಾ ಹಾಗೂ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು   

ತಿಪಟೂರು: ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇಂದ್ರದ ಸ್ವಯತ್ತ ತನಿಖಾ ಸಂಸ್ಥೆಗಳಾದ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳನ್ನು ದುರ್ಬಳಕೆ ಮಾಡಿಕೊಂಡು ತನಿಖೆ ನೆಪದಲ್ಲಿ ಕಾಂಗ್ರೆಸ್ ನಾಯಕರುಗಳ ಮೇಲೆ ದಬ್ಬಾಳಿಕೆ ಮಾಡುತ್ತಿವೆ ಎಂದು ಆರೋಪಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಸಿಂಗ್ರಿ ನಂಜಪ್ಪ ವೃತ್ತದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್, ತಾಲ್ಲೂಕು ಛಲವಾದಿ ಮಹಾಸಭಾ ಹಾಗೂ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನೂರಾರು ಕಾರ್ಯಕರ್ತರು ಸೇರಿ ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನು ನಡೆಸಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಜಗೂರು ಮಂಜುನಾಥ್, ಜಿ.ಪರಮೇಶ್ವರ್ ರಾಜಕೀಯ ರಂಗದಲ್ಲಿ ದಲಿತ ನಾಯಕರಾಗಿ ಬೆಳೆಯುವುದನ್ನು ಸಹಿಸದ ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ಅವರ ಒಡೆತನದ ಮನೆ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿಯನ್ನು ನಡೆಸಿದ್ದಾರೆ. ರಾಜ್ಯದ ನಾಯಕರುಗಳಲ್ಲಿ ಭಯ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಡೆನೂರು ಕಾಂತರಾಜು, ಮುಂಬರುವ ಚುನಾವಣೆಗಳನ್ನು ಗುರಿಯಾಗಿ ಇರಿಸಿಕೊಂಡು ಬಿಜೆಪಿಯು ಕಾಂಗ್ರೆಸ್‍ನ ನಾಯಕರ ಮೇಲೆ ಇಲ್ಲದ ಆರೋಪಗಳನ್ನು ಮಾಡುತ್ತಾ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ. ರಾಜಕೀಯ ಎದುರಾಳಿಯನ್ನು ರಾಜಕೀಯವಾಗಿಯೇ ಎದುರಿಸಬೇಕೆ ಹೊರತು ಈ ರೀತಿಯ ಕುತಂತ್ರ ಮಾಡಬಾರದು ಎಂದರು.

ತಾ.ಪಂ. ಅಧ್ಯಕ್ಷ ಜಿ.ಎಸ್.ಶಿವಸ್ವಾಮಿ, ಸಿದ್ಧಾರ್ಥ ಶಿಕ್ಷಣ ಸಂಸ್ಥೆಯು ಜಿ.ಪರಮೇಶ್ವರ ತಂದೆಯಿಂದ ಸ್ಥಾಪನೆಗೊಂಡು ಲಕ್ಷಾಂತರ ಕುಟುಂಬಗಳ ದಾರಿ ದೀಪವಾಗಿದೆ. ಅಂತಹ ಸಂಸ್ಥೆಯ ಮೇಲೆ ಬೇಕೆಂದು ದಾಳಿ ನಡೆಸಿ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ಚಿತ್ರಹಿಂಸೆ ನೀಡಿದ್ದ ಕಾರಣದಿಂದಲೇ ಆಪ್ತ ಸಹಾಯಕ ರಮೇಶ್‌ ಮೃತಪಟ್ಟರು. ಆ ಸಾವಿಗೆ ಅಧಿಕಾರಿಗಳೇ ಕಾರಣ ಎಂದರು.

ಎಪಿಎಂಸಿ ಅಧ್ಯಕ್ಷ ಲಿಂಗರಾಜು, ತಾ.ಪಂ. ಸದಸ್ಯ ಎನ್.ಎಂ.ಸುರೇಶ್, ನಗರಸಭಾ ಸದಸ್ಯರಾದ ಕೋಟೆ ಪ್ರಭು, ವಿನುತಾ, ಮುಖಂಡರಾದ ಅಣ್ಣಯ್ಯ, ಎ.ಟಿ.ಪ್ರಸಾದ್, ಬೆನ್ನಾಯಕನಹಳ್ಳಿ ಶಿವಣ್ಣ, ಪ್ರಕಾಶ್ ಯಾದವ್, ವಕೀಲ ಅಜಯ್, ಅಲ್ಬೂರು ಕೃಷ್ಣೇಗೌಡ, ಮಹಲಿಂಗಪ್ಪ, ಬಜಗೂರು ಗೋವಿಂದಪ್ಪ, ಪುಟ್ಟೇಗೌಡ, ಕಂಚಾಘಟ್ಟ ಚನ್ನಪ್ಪ, ಸಮಿ ಉಲ್ಲಾ, ಇಮ್ರಾನ್, ಕರಡಾಳು ಮಂಜುಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.