ತಿಪಟೂರು: ತುಮಕೂರು–ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ ನಡೆಯುತ್ತಿದೆ. ಮೊದಲ ಹಂತದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಅದೇ ಭಾಗವನ್ನು ಮತ್ತೆ ಕಿತ್ತು ಮರು ಕಾಮಗಾರಿ ಪ್ರಾರಂಭಿಸಲಾಗಿದೆ. ಇದರ ನಡುವೆ ಅಲ್ಲಿನ ಕೆರೆಗೆ ನೀರು ಹೋಗುವ ಜಲಮಾರ್ಗವನ್ನು ತಡೆಗಟ್ಟಲಾಗಿದೆ.
ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದ ಕಾರಣ ಕೆರೆಕಟ್ಟೆಗೆ ನೀರು ಹರಿಯದೆ ನಿಂತ ಪರಿಣಾಮ ರಸ್ತೆ ಕೆಸರುಗದ್ದೆಯಂತೆ ಆಗಿದೆ.
ಇಲ್ಲಿನ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಅನೇಕ ವಾಹನಗಳು ಈ ರಸ್ತೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿವೆ. ಸ್ಥಳೀಯರು ದಿನನಿತ್ಯ ಭೀತಿಯೊಂದಿಗೆ ಸಂಚರಿಸುವಂತಾಗಿದೆ.
ಹೆದ್ದಾರಿ ಕಾಮಗಾರಿ ಅಭಿವೃದ್ಧಿಗಿಂತ ಹೆಚ್ಚು ಕಷ್ಟಗಳನ್ನು ತಂದಿದೆ. ಯೋಜನೆಯ ಸಮಯ ಪಾಲನೆ, ಪಾದಚಾರಿಗಳಿಗೆ ಸಂಚಾರದ ವ್ಯವಸ್ಥೆಗೆ ತೊಂದರೆ ನೀಡಲಾಗಿದೆ. ಗುಣಮಟ್ಟದ ಕಾಮಗಾರಿ ಇಲ್ಲದೆ ಪದೇ ಪದೇ ರಸ್ತೆ ಅಗೆಯಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಗ್ರಾಮಸ್ಥ ಕೇಶವ್ ಮಾತನಾಡಿ, ಪೊಲೀಸ್ ಇಲಾಖೆ ಮೂಲಕ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಹಾಗೂ ಶಾಸಕ ಮತ್ತು ಸಂಸದರಿಗೂ ಕಾಮಗಾರಿಯ ಅವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದ್ದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಹೆದ್ದಾರಿಯ ಕಾಮಗಾರಿ ಸ್ಥಗಿತಗೊಂಡಿದ್ದ ರಸ್ತೆಯ ತುಂಬಾ ಮಳೆ ನೀರು ನಿಂತಿರುವುದು.
ಹೆದ್ದಾರಿಯ ಕಾಮಗಾರಿ ಸ್ಥಗಿತಗೊಂಡಿದ್ದ ರಸ್ತೆಯ ತುಂಬಾ ಮಳೆ ನೀರು ನಿಂತಿರುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.