ತಿಪಟೂರು: ತಾಲ್ಲೂಕಿನ ಬಿದರೆಗುಡಿಯಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆ ರಸ್ತೆಯಲ್ಲಿಯೇ ನಡೆಯುತ್ತಿದ್ದು, ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಕಿರಿಕಿರಿಯಾಗಿದೆ.
ಈ ಸಂತೆಯಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ.
ರಸ್ತೆಯ ಎರಡು ಬದಿ ಸಂತೆ ನಡೆಯುತ್ತಿದ್ದು, ಪಾದಚಾರಿಗಳಿಗೆ ಸ್ಥಳವಿಲ್ಲದಂತಾಗಿದೆ. ಭಾರಿ ವಾಹನಗಳ ನಿರಂತರ ಸಂಚಾರದ ನಡುವೆ ನಡೆಯುವ ವ್ಯಾಪಾರವು ಅನೇಕ ಬಾರಿ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ.
ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ಬಿದರೆಗುಡಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಅರಸೀಕೆರೆ-ತಿಪಟೂರು-ಹೊನ್ನವಳ್ಳಿ ಮಧ್ಯೆ ಇರುವುದರಿಂದ ಸಂತೆ ಜನಸಂದಣಿಯಿಂದ ಕೂಡಿರುತ್ತದೆ. ಸಂತೆ ಸ್ಥಳದಲ್ಲಿ ನೂರಾರು ಪುಟ್ಟ ತರಕಾರಿ, ತಿಂಡಿ ತಿನಿಸು ಅಂಗಡಿಗಳು ಸೇರುವ ತಾಣವಾಗಿದೆ. ಹದಿನೈದು ಅಡಿ ಅಗಲವಿರುವ ರಸ್ತೆಯ ಅಕ್ಕಪಕ್ಕದಲ್ಲಿಯೇ ಕುಳಿತು ವ್ಯಾಪಾರ ಮಾಡಲಾಗುತ್ತಿದೆ. ಇಲ್ಲಿನ ಅಂಗಡಿಗಳಲ್ಲಿ ಮಳೆ, ಗಾಳಿಗೆ ಯಾವುದೇ ಭದ್ರತೆ ಇಲ್ಲ.
ಸಂತೆಗೆ ಯಾವುದೇ ನಿರ್ದಿಷ್ಟ ಸ್ಥಳ ನಿಗದಿಯಾಗಿಲ್ಲ. ರಾಜ್ಯ ಹೆದ್ದಾರಿ ಮತ್ತು ಆಂತರಿಕ ಗ್ರಾಮೀಣ ರಸ್ತೆಗಳ ಪಕ್ಕದಲ್ಲಿ ನಡೆಯುತ್ತದೆ.
ಸ್ಥಳೀಯರ ಪ್ರಕಾರ ಸಂತೆಯಲ್ಲಿ ಉಂಟಾಗುವ ಜನಸಂದಣಿ ಹಾಗೂ ವಾಹನ ನಿಯಂತ್ರಣಕ್ಕೆ ಯಾವುದೇ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವುದಿಲ್ಲ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಿಬ್ಬಂದಿಯನ್ನು ನಿಯೋಜಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯ.
ಬಿದರೆಗುಡಿ ಸಂತೆಗೆ ಸೂಕ್ತ ಸ್ಥಳ ಹಾಗೂ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿರು ಒತ್ತಾಯಿಸಿದ್ದಾರೆ.
ವ್ಯಾಪಾರ ನಡೆಯುವ ಸ್ಥಳವು ರಸ್ತೆ ಪಕ್ಕದಲ್ಲಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಬಿದರೆಗುಡಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸ್ವತ್ತು ಇದ್ದು, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯಿತಿ ಸ್ಥಳ ಗುರುತಿಸಿ ಕೊಟ್ಟರೆ ಸ್ಥಳೀಯ ಸರ್ಕಾರದಿಂದ ಸೂಕ್ತ ವ್ಯವಸ್ಥೆ ಮಾಡಲಾಗುವುದು.–ಜ್ಯೋತಿ ಮಹೇಶ್, ಮತ್ತಿಹಳ್ಳಿ ಗ್ರಾ.ಪಂ ಅಧ್ಯಕ್ಷ
ಗ್ರಾಮೀಣ ಭಾಗದ ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಅವರೇ ತಂದು ಮಾರಾಟ ಮಾಡುವುದರಿಂದ ತಾಜಾವಾಗಿರುತ್ತದೆ. ಆದರೆ ಸಂತೆ ನಡೆಯುವ ಸ್ಥಳದಲ್ಲಿ ರಸ್ತೆ ಕಿರಿದಾಗಿದ್ದು, ಸಂಚಾರ ದಟ್ಟಣೆ ಇರುತ್ತದೆ. ಸಂತೆಗೆ ಪರ್ಯಾಯ ಜಾಗ ಕಲ್ಪಿಸುವುದು ಉತ್ತಮ.–ಹರೀಶ್, ಗ್ರಾಹಕ
ಹೊನ್ನವಳ್ಳಿ, ಹುಳಿಯಾರು, ಚಿತ್ರದುರ್ಗ, ಬಳ್ಳಾರಿ ಕಡೆಗೆ ಸಾಗುವ ಸಾವಿರಾರು ವಾಹನಗಳು ಸಾಗುವ ಹೆದ್ದಾರಿ ಪಕ್ಕದಲ್ಲಿ ಸಂತೆ ನಡೆಯುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಪಕ್ಕದಲ್ಲಿಯೇ ಗ್ರಾಮ ಪಂಚಾಯಿತಿ ಮತ್ತು ಎಪಿಎಂಸಿ ಅನುದಾನಿತ ಮಾರುಕಟ್ಟೆ ಪ್ರಾಂಗಣ ಇದ್ದು, ಸಂತೆ ಸ್ಥಳ ಸ್ಥಳಾಂತರಕ್ಕೆ ಗಮನಹರಿಸಬೇಕು.–ವಿಜಯ್‌ಕುಮಾರ್, ಕರವೇ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.