
ತೋವಿನಕೆರೆ (ತುಮಕೂರು): ‘ಹಲವು ತಳಿಗಳಿದ್ದರೂ ಜಿಲ್ಲೆಯ ಹುಣಸೆ ವೈವಿಧ್ಯಕ್ಕೆ ಹೆಸರುವಾಸಿ. ಕೃಷಿಕರು ಈ ತಳಿಗಳನ್ನು ಸಸ್ಯ ಪ್ರಭೇದಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಲ್ಲಿ (ಪಿಪಿವಿಎಫ್‌ಆರ್‌ಎ) ನೋಂದಣಿ ಮಾಡಿಸಬೇಕು’ ಎಂದು ಪ್ರಾಧಿಕಾರದ ರಿಜಿಸ್ಟ್ರಾರ್ ಜನರಲ್ ಡಿ.ಕೆ.ಅಗರವಾಲ್ ಸಲಹೆ ನೀಡಿದರು.
ಸೋಮವಾರ ಇಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಆಯೋಜಿಸಿದ್ದ ‘ತಳಿಗಳ ರಕ್ಷಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ಮೂಲಕ ಹುಣಸೆ ರೈತರ ಸಬಲೀಕರಣ’ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯ ‘ಲಕ್ಷ್ಮಣ’ ಹುಣಸೆ ಅತ್ಯಂತ ಉತ್ಕೃಷ್ಟವಾದ ತಳಿ. ‘ಸಿದ್ದು’ ಮತ್ತು ‘ಶಂಕರ ಹಲಸು’ ಈಗಾಗಲೇ ಪ್ರಾಧಿಕಾರದಲ್ಲಿ ನೋಂದಣಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹುಣಸೆ ತಳಿಗಳನ್ನು ನೋಂದಣಿ ಮಾಡಿಸಬೇಕು. ಪ್ರಾಧಿಕಾರದಿಂದ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಐಐಎಚ್‌ಆರ್ ನಿರ್ದೇಶಕ ಟಿ.ಕೆ.ಬೆಹೆರಾ ಅವರು, ‘ಹುಣಸೆ ಹಣ್ಣಿನಲ್ಲಿ ಎಲ್ಲವೂ ಉಪಯೋಗವಿದೆ. ಹುಣಸೆ ಬೀಜಕ್ಕೂ ಬೇಡಿಕೆ ಹೆಚ್ಚಾಗಿದೆ. ಬೆಳೆಗಾರರು ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಹುಣಸೆ ಸಂಸ್ಕರಣೆ ಮತ್ತು ಯಂತ್ರಗಳ ಬಳಕೆ, ಹುಣಸೆ ಕೃಷಿ ಭವಿಷ್ಯ ಹಾಗೂ ಸವಾಲು, ಮೌಲ್ಯವರ್ಧನೆ, ಮಾರುಕಟ್ಟೆ ಕುರಿತು ಗೋಷ್ಠಿಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.