ADVERTISEMENT

ಚಿಕ್ಕನಾಯಕನಹಳ್ಳಿ | ಶೆಟ್ಟಿಕೆರೆ ಗೇಟ್ ಬಳಿ ಅಡ್ಡಾದಿಡ್ಡಿ ಸಂಚಾರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 5:06 IST
Last Updated 21 ಜನವರಿ 2026, 5:06 IST
ಚಿಕ್ಕನಾಯಕನಹಳ್ಳಿ ಶೆಟ್ಟಿಕೆರೆ ಗೇಟ್ ಬಳಿ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿರುವುದು
ಚಿಕ್ಕನಾಯಕನಹಳ್ಳಿ ಶೆಟ್ಟಿಕೆರೆ ಗೇಟ್ ಬಳಿ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿರುವುದು   

ಚಿಕ್ಕನಾಯಕನಹಳ್ಳಿ: ಪಟ್ಟಣದ ಪ್ರಮುಖ ಸಾರಿಗೆ ಕೇಂದ್ರವಾದ ಶೆಟ್ಟಿಕೆರೆ ಗೇಟ್ ಬಳಿ ಸಂಚಾರ ಅಸ್ತವ್ಯಸ್ತದಿಂದ ಕೂಡಿದೆ. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಸುರಕ್ಷತೆಗೆ ತೀವ್ರ ಅಪಾಯ ಎದುರಾಗಿದೆ. ಹುಳಿಯಾರು, ಕೆ.ಬಿ.ಕ್ರಾಸ್ ಮತ್ತು ತಿಪಟೂರು ದಿಕ್ಕು ಸಂಪರ್ಕಿಸುವ ಈ ವೃತ್ತದಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.

ರಸ್ತೆ ಬದಿಯಲ್ಲಿರುವ ಸರ್ಕಾರಿ ಬಸ್ ನಿಲ್ದಾಣ ಮತ್ತು ಹತ್ತಿರದಲ್ಲಿರುವ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಈ ಮಾರ್ಗವನ್ನು ಅವಲಂಬಿಸಿದ್ದಾರೆ. ಆದರೆ, ವೈಜ್ಞಾನಿಕ ವೇಗ ನಿಯಂತ್ರಕ ಅಭಾವದಿಂದಾಗಿ ರಸ್ತೆ ದಾಟುವುದು ಪಾದಚಾರಿಗಳಿಗೆ ಜೀವಘಾತಕ ಸವಾಲಾಗಿದೆ.

ಸಂಚಾರ ದಟ್ಟಣೆ ಮತ್ತು ಸಣ್ಣಪುಟ್ಟ ಅಪಘಾತಗಳಿಂದ ಬೇಸತ್ತ ನಿವಾಸಿಗಳು, ತಾವೇ ಹಳೆ ಟೈರ್‌ ತಂದು ವೃತ್ತಾಕಾರದಲ್ಲಿ ಜೋಡಿಸಿ ತಾತ್ಕಾಲಿಕ ವೇಗ ನಿಯಂತ್ರಣದ ವ್ಯವಸ್ಥೆ ಮಾಡಿದ್ದರು. ಆದರೆ, ಈ ವ್ಯವಸ್ಥೆಯನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಟೈರ್‌ಗಳನ್ನು ತೆರವುಗೊಳಿಸಿದ ಅಧಿಕಾರಿಗಳು ವೈಜ್ಞಾನಿಕವಾಗಿ ಸ್ಪೀಡ್ ಬ್ರೇಕರ್‌ (ಹಂಪ್‌ಗಳನ್ನು) ಹಾಕದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ಎಸ್‌ಬಿಐ ಬ್ಯಾಂಕ್ ಮತ್ತು ಸುತ್ತಲಿನ ಅಂಗಡಿಗಳಿಗೆ ಬರುವವರು ತಮ್ಮ ವಾಹನಗಳನ್ನು ರಸ್ತೆ ಮೇಲೆ ನಿಲ್ಲಿಸುವುದರಿಂದ ರಸ್ತೆ ಇನ್ನೂ ಕಿರಿದಾಗಿದೆ. ಇದು ದ್ವಿಚಕ್ರ ವಾಹನ ಸವಾರರು ತಿರುವು ತೆಗೆಯುವಾಗ ವೇಗವಾಗಿ ಬರುವ ಬಸ್ ಮತ್ತು ಲಾರಿಗಳಿಗೆ ಡಿಕ್ಕಿ ಹೊಡೆಯುವ ಅಪಾಯ ಹೆಚ್ಚಿಸಿದೆ.

ರಾಷ್ಟ್ರೀಯ ಹೆದ್ದಾರಿ 150-ಎ ರಸ್ತೆ ಪಾದಚಾರಿ ಮಾರ್ಗ ವ್ಯಾಪಕವಾಗಿ ಒತ್ತುವರಿಗೆ ಒಳಗಾಗಿದೆ. ಸಾರ್ವಜನಿಕರು ಅನಿವಾರ್ಯವಾಗಿ ಪ್ರಾಣಾಪಾಯದ ನಡುವೆ ಮುಖ್ಯ ರಸ್ತೆಯಲ್ಲಿ ನಡೆಯಬೇಕಾಗಿದೆ. ಪಟ್ಟಣದಲ್ಲಿ ಈ ಹಿಂದೆ ಇದ್ದ ಜೀಬ್ರಾ ಕ್ರಾಸಿಂಗ್‌ ಈಗ ಅದೃಶ್ಯವಾಗಿದೆ. ರಸ್ತೆ ದಾಟಲು ಪಾದಚಾರಿಗಳಿಗೆ ಯಾವುದೇ ಸುರಕ್ಷಿತ ಮಾರ್ಗಗಳಿಲ್ಲ.

ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ, ಇಲ್ಲಿನ ಅಸ್ತವ್ಯಸ್ತ ಸಂಚಾರ ನಿಯಂತ್ರಿಸಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಜೀವ ರಕ್ಷಿಸಬೇಕು ಎಂದು ನಿವಾಸಿ ರಾಜೇಂದ್ರ ಒತ್ತಾಯಿಸಿದ್ದಾರೆ.

ನಮ್ಮ ತಾಲ್ಲೂಕನ್ನು 'ಅಪಘಾತ ಮುಕ್ತ ತಾಲ್ಲೂಕಾಗಿ' ರೂಪಿಸಲು ಸಂಕಲ್ಪ ಮಾಡಬೇಕೆಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ ಟ್ರೇಡ್ ಯೂನಿಯನ್ (ರಿ) ರಾಜ್ಯ ಜಂಟಿ ಕಾರ್ಯದರ್ಶಿ ಮಹಮದ್ ಹುಸೇನ್ (ಗುಂಡ) ಆಗ್ರಹಿಸಿದ್ದಾರೆ. 

ಸ್ಥಳೀಯ ನಿವಾಸಿ ಅಕ್ಷಯ್, ‘ಗಾರ್ಮೆಂಟ್‌ಗಳ ವಾಹನಗಳು ಸಂಜೆ ಸಮಯದಲ್ಲಿ ವೇಗವಾಗಿ ಸಂಚರಿಸುವುದರಿಂದ ಪಾದಚಾರಿಗಳು ಭಯಭೀತರಾಗಿದ್ದಾರೆ. ವೇಗ ನಿಯಂತ್ರಕ ಅಳವಡಿಕೆ ತುರ್ತು ಅವಶ್ಯ’ಎನ್ನುತ್ತಾರೆ.

ರಾಷ್ಟ್ರೀಯ ಹೆದ್ದಾರಿ 150-ಎ ನಿರ್ಮಾಣದಲ್ಲಿ ಸುರಕ್ಷತ ನಿಯಮಗಳನ್ನು ಪೂರ್ಣವಾಗಿ ಕಡೆಗಣಿಸಲಾಗಿದೆ. ಪುರಸಭೆಯು ಮಾರ್ಗಸೂಚಿ ಫಲಕಗಳಿಗೆ ರಿಫ್ಲೆಕ್ಟಿವ್ (ರೇಡಿಯಂ) ಸ್ಟಿಕರ್ ಅಳವಡಿಸದೆ ಕೇವಲ ಬಣ್ಣ ಬಳಿದಿರುವುದರಿಂದ ರಾತ್ರಿ ವೇಳೆ ವಾಹನ ಚಾಲಕರು ದಾರಿ ಕಾಣದೆ ದಿಕ್ಕು ತಪ್ಪುತ್ತಾರೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಸರಿಯಾದ ಪಥ ಬದಲಾವಣೆ ವ್ಯವಸ್ಥೆ ಇಲ್ಲದೆ ಸರಣಿ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ ಗಂಗೂ ಆರ್ಟ್ಸ್‌ನ ಗಂಗಾಧರ ಮಗ್ಗದ ಮನೆ.

ವಾಹನಗಳ ಅಡ್ಡಾದಿಡ್ಡಿ ಚಾಲನೆಯಿಂದ ರಸ್ತೆ ದಾಟಲು ದ್ವಿ ಚಕ್ರ ವಾಹನ ಸವಾರರ ಪರದಾಟ.

ವೈಜ್ಞಾನಿಕ ವೇಗ ನಿಯಂತ್ರಕ ಅಳವಡಿಸಲಿ ಅತಿವೇಗದ ವಾಹನಗಳಿಗೆ ದಂಡ ವಿಧಿಸಲಿ ವಿದ್ಯಾರ್ಥಿಗಳ ಸಂಚಾರ ಸಮಯದಲ್ಲಿ ಪೊಲೀಸರನ್ನು ನಿಯೋಜಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.