ADVERTISEMENT

ಶಿರಾ: ಸವಾಲಾಗಿಯೇ ಉಳಿದ ಸಂಚಾರ ಸಮಸ್ಯೆ

ಶಾಶ್ವತ ಪರಿಹಾರಕ್ಕೆ ನಿರಾಸಕ್ತಿ: ಎಲ್ಲೂ ಕಾಣದ ಸಿಗ್ನಲ್‌ ಲೈಟ್‌: ಪಾರ್ಕಿಂಗ್‌ಗೆ ಇಲ್ಲ ಜಾಗ

ಎಚ್.ಸಿ.ಅನಂತರಾಮು
Published 24 ನವೆಂಬರ್ 2025, 5:21 IST
Last Updated 24 ನವೆಂಬರ್ 2025, 5:21 IST
ಶಿರಾದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಪಕ್ಕದಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಶಿರಾದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಪಕ್ಕದಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ   

ಶಿರಾ: ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗುತ್ತಿರುವ ಶಿರಾ ಶರವೇಗದಲ್ಲಿ ಬೆಳೆಯುತ್ತಿದೆ. ನಗರದಲ್ಲಿ ಜನಸಂಖ್ಯೆ ಹಾಗೂ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಗಿದೆ.

ನಗರ ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಆದರೆ ನಗರದ ಸಂಚಾರ ವ್ಯವಸ್ಥೆ ಸುಧಾರಣೆ ಕಂಡಿಲ್ಲ. ವಾಹನ ದಟ್ಟಣೆ ನಿಯಂತ್ರಿಸಲು ಸಂಬಂಧಪಟ್ಟವರು ಪ್ರಯತ್ನಿಸುತ್ತಿಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಸರ್ಕಾರಿ ಆಸ್ಪತ್ರೆ ಬಿಟ್ಟರೆ ನಗರದಲ್ಲಿ ಎಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ನಗರಸಭೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಪಾರ್ಕಿಂಗ್ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ. ವಾರಾಂತ್ಯ, ಸಂತೆ ದಿನವಾದ ಮಂಗಳವಾರ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಾರೆ.

ADVERTISEMENT

ನಗರದಲ್ಲಿ ಹಲವು ಶಾಲೆ, ಕಾಲೇಜುಗಳಿವೆ. ಪ್ರತಿನಿತ್ಯ ವಿದ್ಯಾರ್ಥಿಗಳು, ರೈತರು ಸೇರಿದಂತೆ ಸಾವಿರಾರು ಜನರು ನಗರಕ್ಕೆ ಬರುತ್ತಾರೆ. ಸಾವಿರಾರು ಲಾರಿ, ಟ್ರ್ಯಾಕ್ಟರ್, ಖಾಸಗಿ ಬಸ್ ಸಂಚರಿಸುತ್ತವೆ. ಜನ ನಡೆದಾಡಲು ಪಾದಚಾರಿ ಮಾರ್ಗಗಳೇ ಇಲ್ಲ. ಪಾದಾಚಾರಿ ರಸ್ತೆಗಳು ಬೀದಿ ಬದಿ ಅಂಗಡಿಗಳು ಹಾಗೂ ದ್ವಿಚಕ್ರವಾಹನ ಪಾರ್ಕಿಂಗ್ ಜಾಗಗಳಾಗಿವೆ. ಹೀಗಾಗಿ ಜನ ಅನಿವಾರ್ಯವಾಗಿ ರಸ್ತೆಯಲ್ಲೆ ನಡೆದುಕೊಂಡು ಹೋಗಬೇಕಾಗಿದೆ. ಇದರಿಂದಾಗಿ ಪಾದಚಾರಿಗಳಿಗೆ ಅಪಾಯ ತಪ್ಪಿದ್ದಲ್ಲ.

ನಗರದಲ್ಲಿ ಎಲ್ಲಿ ನೋಡಿದರು ಬಹು ಅಂತಸ್ತಿನ ವಾಣಿಜ್ಯ ಕಟ್ಟಡಗಳು ಅಕ್ರಮವಾಗಿ ತಲೆ ಎತ್ತುತ್ತಿವೆ. ಇವುಗಳ ತಡೆಗೆ ನಗರಸಭೆ ವಿಫಲವಾಗಿದೆ. 5ರಿಂದ 6 ಅಂತಸ್ತು ಕಟ್ಟಡ ನಿರ್ಮಿಸುವ ಇವರು ಪಾರ್ಕಿಂಗ್‌ಗೆ ಯಾವುದೇ ವ್ಯವಸ್ಥೆ ಮಾಡುವುದಿಲ್ಲ. ಕೆಳ ಅಂತಸ್ತಿನಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿಕೊಟ್ಟರೆ ಅನುಕೂಲವಾಗುವುದು.

ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಪ್ರವಾಸಿ ಮಂದಿರ ವೃತ್ತ, ಬುಕ್ಕಾಪಟ್ಟಣ ವೃತ್ತ, ಹಳೆ ಪುರಸಭೆ ರಸ್ತೆ, ರಾಘವೇಂದ್ರ ಸ್ವಾಮಿ ದೇವಸ್ಥಾನ ರಸ್ತೆ, ಖಾಸಗಿ ಬಸ್ ನಿಲ್ದಾಣದ ರಸ್ತೆ, ಟಿಕೆಪಿ ಲಾಡ್ಜ್ ರಸ್ತೆ, ಮಧುಗಿರಿ ರಸ್ತೆ, ಹಳೆ ಆಸ್ಪತ್ರೆ ರಸ್ತೆ ಸೇರಿದಂತೆ ಬಹುತೇಕ‌ ಕಡೆ ವಾಹನ ದಟ್ಟಣೆ ಹೆಚ್ಚಾಗಿದ್ದು ಫುಟ್‌ಪಾತ್‌ನಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಹೆಚ್ಚಿನ‌ ತೊಂದರೆಯಾಗುತ್ತಿದೆ.

ಪುಡ್ ಪಾರ್ಕ್: ನಗರದಲ್ಲಿ ಬಹುತೇಕ ಕಡೆ ಸಂಚಾರ ದಟ್ಟಣೆಗೆ ಬೀದಿ ಬದಿಯ ಹೋಟೆಲ್‌ಗಳು ಕಾರಣವಾಗಿದೆ. ಪಾದಚಾರಿ ರಸ್ತೆಯಲ್ಲಿ ಹೋಟೆಲ್‌ಗಳನ್ನು ಇಟ್ಟುಕೊಂಡಿದ್ದ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುವುದರಿಂದ ಪಾದಚಾರಿಗಳಿಗೆ ಹೆಚ್ಚಿನ ತೊಂದರೆಯಾಗಿ ಅಪಘಾತಗಳಿಗೆ ಕಾರಣವಾಗುತ್ತಿದೆ.

ನಗರಸಭೆ ಹಾಗೂ ಪೊಲೀಸ್ ಇಲಾಖೆ ಸಂಚಾರ ದಟ್ಟಣೆ ಕಡಿಮೆ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಸಮಸ್ಯೆಯನ್ನು ಜಟಿಲಗೊಳಿಸಿದೆ. ಜಲ್ಲಾ ಕೇಂದ್ರವಾಗಲು ಸಿದ್ಧವಾಗಿರುವ ನಗರದಲ್ಲಿ ಒಂದೇ ಒಂದು ಸಂಚಾರ ದೀಪವೂ ಇಲ್ಲವಾಗಿದೆ.

ನಗರದಲ್ಲಿ ಸಂಚಾರ ಪೊಲೀಸ್ ಠಾಣೆ ಸ್ಥಾಪಿಸುವಂತೆ ಬಹು ದಿನಗಳಿಂದ ಬೇಡಿಕೆ ಇದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಶಿರಾದ ಆಸ್ಪತ್ರೆ ಸಮೀಪ ತರಕಾರಿ ಹಣ್ಣು ಮಾರಾಟ
ಶಿರಾದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ರಸ್ತೆಯಲ್ಲಿ ಹೂವು ಹಣ್ಣು ಮಾರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.